ಪುತ್ತೂರಿನಲ್ಲಿ ಭೀಕರ ಅಪಘಾತ: ಮೂವರಿಗೆ ಗಂಭೀರ ಗಾಯ

ಪುತ್ತೂರು: ನಗರದ ಮಂಜಲ್ಪಡ್ಪು ಎಂಬಲ್ಲಿ ಶನಿವಾರ ಕಾರು ಮತ್ತು ಆಟೋ ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಟೋ ರಿಕ್ಷಾ ಚಾಲಕ, ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಫಜೀರ್ ನಿವಾಸಿ ಸುನಿಲ್ ಪಿಂಟೋ(37), ಫಜೀರ್ ನಿವಾಸಿಗಳಾದ ಉಸ್ಮಾನ್(57) ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ(17) ಎಂದು ಗುರುತಿಸಲಾಗಿದೆ.

ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ತೀವ್ರ ಏಟು ತಗುಲಿದ್ದು, ಮುರ್ಷಿದಾ ಅವರ ತಲೆಗೆ ಗಾಯವಾಗಿದೆ. ಮೂವರಿಗೂ ಪುತ್ತೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಜೀರ್‌ನಿಂದ ಆಟೋ ರಿಕ್ಷಾ ಬಾಡಿಗೆಗೆ ಗೊತ್ತು ಮಾಡಿಕೊಂಡು ಔಷಧಕ್ಕೆಂದು ಬಂದಿದ್ದ ಉಸ್ಮಾನ್ ಅವರು ಮರಳುವಾಗ ಪುತ್ತೂರು ಹೊರವಲಯದ ಕುಂಬ್ರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯತ್ತಿರುವ ತನ್ನ ಮೊಮ್ಮಗಳು ಮುರ್ಷಿದಾಳನ್ನು ಕೂರಿಸಿಕೊಂಡು ಫಜೀರ್‌ನತ್ತ ಹೋಗುತ್ತಿದ್ದರು.

ಮಂಜಲ್ಪಡ್ಪು ತಲುಪುವಾಗ ಎದುರಿನಿಂದ ಬರುತ್ತಿದ್ದ ಕಾರೊಂದು ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮುಂದೊತ್ತಿ ಬಂದಾಗ ರಿಕ್ಷಾ ಮತ್ತು ಕಾರಿನ ನಡುವೆ ಮಖಾಮುಖಿ ಸಂಭವಿಸಿದೆ. ಕಾರು ಮತ್ತು ಆಟೋಗಳೆರಡೂ ಜಖಂಗೊಂಡಿದೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.