ಕೊಲ್ಲೂರು ದೇವಳದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಪ್ರಕರಣ: ರಾಜಸ್ಥಾನ ಮೂಲದ ಆರೋಪಿ ಬಂಧನ

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಠಿಸಿ ಭಕ್ತರಿಂದ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ರಾಜ್ಯದ ತಿಜಾರಿ ಜಿಲ್ಲೆಯ ನಾಸೀರ್ ಹುಸೇನ್(21) ಬಂಧಿತ ಆರೋಪಿ. ಈತ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅನ್ನು ಹೊಲುವ ನಕಲಿ ವೆಬ್ ಸೈಟ್ ಸೃಷ್ಠಿಸಿ ದೇವಸ್ಥಾನದ ಭಕ್ತಾಧಿಗಳಿಂದ ಮುಂಗಡವಾಗಿ ರೂಮ್ ಬುಕಿಂಗ್ ಮಾಡಿಸುವ ಬಗ್ಗೆ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದನು. ಈ ಬಗ್ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಕಾರ್ಯಾನಿರ್ವಹಣಾಧಿಕಾರಿ ನೀಡಿದ ದೂರಿನಂತೆ ನ.3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವು ಮುಂಜುರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದಾಖಲಾದ ಪ್ರಕರಣ ವಾಗಿರುವುದರಿಂದ ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗ ದರ್ಶನದಲ್ಲಿ ತನಿಖಾಧಿಕಾರಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ. ಮತ್ತು ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ ಎ.ಕಾಯ್ಕಿಣಿ ನೇತೃತ್ವದಲ್ಲಿ ಕೊಲ್ಲೂರು ಎಸ್ಸೈಗಳಾದ ವಿನಯ ಎಂ. ಕೋರ್ಲಹಳ್ಳಿ ಮತ್ತು ಭೀಮ ಶಂಕರ ಸಿನ್ನೂರ ಹಾಗೂ ಸಿಬ್ಬಂದಿ ಕೊಲ್ಲೂರು ಠಾಣೆಯ ನಾಗೇಂದ್ರ, ಗಂಗೊಳ್ಳಿ ಪೊಲೀಸ್ ಠಾಣೆಯ ರಾಘವೇಂದ್ರ ಶೆಟ್ಟಿ, ಕೃಷ್ಣ ದೇವಾಡಿಗ ನೇತೃತ್ವದ ತಂಡವನ್ನು ರಚಿಸಲಾಗಿತ್ತು.

ತನಿಖೆ ನಡೆಸಿದ ತಂಡ, ಆರೋಪಿಯನ್ನು ಡಿ.19ರಂದು ಬಂಧಿಸಿ, ಆತನಿಂದ ಕೃತ್ಯಕ್ಕೆ ಬಳಸಿದ ಲ್ಯಾಪ್‌ಟಾಪ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿ.20ರಂದು ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Related Posts

Leave a Reply

Your email address will not be published.