ವಸತಿ ಸಮುಚ್ಚಯದ ಫ್ಲಾಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆಯ ಆರೋಪ : ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಸ್ಪಷ್ಟನೆ

ಉಡುಪಿ : “ವೈಜ‌ರ್” ವಸತಿ ಸಮುಚ್ಚಯದ ಫ್ಲಾಟ್ ಮಾರಾಟದಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ವಿವಾದಕ್ಕೆ ಸಂಬಂಧಿಸಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ 5.4 ಕೋಟಿ ಸಾಲ ಪಡೆದುಕೊಂಡಿದ್ದು, ಈವರೆಗೆ ನಾನು 6 ಕೋಟಿ ರೂ. ಬ್ಯಾಂಕಿಗೆ ಪಾವತಿಸಿದ್ದೇನೆ. ಇದೀಗ ಬ್ಯಾಂಕ್ ಮತ್ತೆ 5 ಕೋಟಿ ರೂ. ಸಾಲ ಇದೆ ಎಂಬುದಾಗಿ ಹೇಳುತ್ತಿದೆ. ಈ ಬಗ್ಗೆ 2.5 ಕೋಟಿ ರೂ. ಒನ್‌ಟೈಮ್ ಸೆಟಲ್ಮೆಂಟ್ ಮೂಲಕ ಪಾವತಿಸಲು ಬ್ಯಾಂಕ್ ಒಪ್ಪಿದೆ. ಇದಕ್ಕಾಗಿ ಹೂಡಿಕೆದಾರರು ಕೂಡ ಮುಂದೆ ಬಂದಿದ್ದಾರೆ. ಇದೀಗ ನನ್ನ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮ ಈ ಹೂಡಿಕೆದಾರರು ಹಿಂದೇಟು ಹಾಕುವ ಸಾಧ್ಯತೆ ಇದೆ. ಅಂತಿಮವಾಗಿ ಬ್ಯಾಂಕಿನವರು ಈ ವಸತಿ ಸಮುಚ್ಚಯವನ್ನು ಸ್ವಾಧೀನಪಡಿಸಿಕೊಳ್ಳಬಹುದು. ಇದರಿಂದ ಇದರಲ್ಲಿರುವ ಫ್ಲಾಟ್‌ನವರು ಬೀದಿ ಪಾಲಾಗಲಿದ್ದಾರೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲಿಯೂ ತಲೆಮರಿಸಿಕೊಂಡಿಲ್ಲ, ಕಾಲು ನೋವಿನ ಸಮಸ್ಯೆಯಿಂದ ಮನೆಯಲ್ಲೆ ಇದ್ದೇನೆ. ಒಂದು ಫ್ಲಾಟ್‌ನ್ನು ಇಬ್ಬರು, ಮೂವರಿಗೆ ಮಾರಾಟ ಮಾಡಿದ್ದೇನೆ ಎಂಬ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಪೊಲೀಸರಿಗೆ ನೀಡಿದ ದೂರಿನಲ್ಲೂ ಯಾವುದೇ ಪೂರಕ ದಾಖಲೆಗಳಿಲ್ಲ. ನಾನು ವಸತಿ ಸಮುಚ್ಚಯದಲ್ಲಿ ಬೌನ್ಸರ್‌ಗಳನ್ನು ಇಟ್ಟಿಲ್ಲ. ಸಂಬಂಧ ಇಲ್ಲದವರು ಕಟ್ಟಡದೊಳಗೆ ಬಾರದಂತೆ ತಡೆಯಲು ಸುಪರ್‌ವೈಸರ್ ಗಳನ್ನು ನೇಮಕ ಮಾಡಿದ್ದೇನೆ. ನನ್ನ ಫ್ಲಾಟ್‌ಗೆ ನಾನು ಸಿಬ್ಬಂದಿಗಳನ್ನು ನೇಮಕ ಮಾಡಿ ಕಾಪಾಡುವುದು ನನ್ನ ಹಕ್ಕು ಎಂದು ಅವರು ಸ್ಪಷ್ಟಪಡಿಸಿದರು.

ನನ್ನ ವಿರುದ್ಧ ಆರೋಪ ಮಾಡುತ್ತಿರುವ ಶೇ.50ರಷ್ಟು ಮಂದಿ ನನ್ನ ವಸತಿ ಸಮುಚ್ಚಯದಲ್ಲಿ ಫ್ಲಾಟ್‌ನ್ನು ಖರೀದಿಸಿಲ್ಲ. 36 ಫ್ಲಾಟ್‌ಗಳಲ್ಲಿ 26 ಫ್ಲಾಟ್ ಗಳನ್ನು ಮಾರಾಟ ಮಾಡಿದ್ದು, ಯಾರು ಕೂಡ ಈವರೆಗೆ ಪೂರ್ಣಪ್ರಮಾಣದಲ್ಲಿ ಹಣವನ್ನು ಪಾವತಿಸಿಲ್ಲ. ಖರೀದಿಸಿದ 16 ಫ್ಲಾಟ್‌ಗಳಲ್ಲಿ ಮಾತ್ರ ಜನ ವಾಸವಾಗಿದ್ದಾರೆ. ಇನ್ನುಳಿದ 10 ಫ್ಲಾಟ್‌ಗಳು ನನ್ನಲ್ಲಿಯೇ ಇದೆ. ಇವೆಲ್ಲವೂ ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಹಿಂದೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿ ಮಾನಹಾನಿ ಮಾಡಿ, ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಕಬಳಿಸುವ ಲ್ಯಾಂಡ್ ಮಾಫಿಯಾದ ಹುನ್ನಾರ ಅಡಗಿದೆ’ ಎಂದು ಉಡುಪಿ ಶ್ರೀಲಕ್ಷ್ಮೀ ಇನ್ಫ್ರಾಸ್ಟ್ರಕ್ಚರ್ ನ ಮಾಲಕ ಅಮೃತ್ ಶೆಣೈ ಆರೋಪಿಸಿದ್ದಾರೆ.

Related Posts

Leave a Reply

Your email address will not be published.