ಮೂಡುಬಿದಿರೆ: ಮೈಸೂರು ವಿಭಾಗೀಯ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ “ಮೈಸೂರು ವಿಭಾಗೀಯ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಗಾರ”ವು ವಿದ್ಯಾಗಿರಿಯ ಶ್ರೀಮತಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡಿತು.
ಮೈಸೂರು ವಿಭಾಗದ ಆ.ಕು.ಕ.ಸೇವೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿದ ಮುಖ್ಯ ಮಾಹಿತಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕಾದರೆ ಅದು ಜಾನಪದ ಕಲೆಗಳ ಮೂಲಕ ಮಾತ್ರ ಸಾಧ್ಯ. ಆಧುನಿಕತೆಯ ಬಿರುಗಾಳಿಯಲ್ಲಿ ಜಾನಪದ ಕಲೆಗಳು ಎಲ್ಲೋ ಸಾಗುತ್ತಿದೆ ಆದರೆ ದ.ಕ., ಉಡುಪಿ ಜಿಲ್ಲೆಯ ಮಣ್ಣಿನ ಗಟ್ಟಿತನದಿಂದಾಗಿ ಐದು ಸಾವಿರ ವರ್ಷದಿಂದಲೂ ಕಲೆಗಳನ್ನು ಜೀವಾಂತವಾಗಿರಿಸಿ ಮುಟ್ಟಿಸುತ್ತಿದ್ದಾರೆ. ಸಿನೆಮಾದ ಮೂಲಕವೂ ಜಾನಪದ ಕಲೆಗಳನ್ನು ಜೀವಾಂತವಾಗಿ ಉಳಿಸುವ ಕೆಲಸ ನಡೆಯುತ್ತಿದೆ ಎಂದ ಅವರು ಇಲ್ಲಿನ ಜಾನಪದ ಕಲೆ ಯಕ್ಷಗಾನದ ಮೂಲಕ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳ ಬಗ್ಗೆ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ಆರೋಗ್ಯ ಸೌಧ ಆ.ಕು.ಕ.ಸೇವೆಗಳ ಉಪ ನಿರ್ದೇಶಕ ಡಾ.ಧನಂಜಯ ಟಿ.ಎನ್.,ಮೈಸೂರು ವಿಭಾಗೀಯ ಉಪನಿರ್ದೇಶಕಿ ಡಾ.ಮಲ್ಲಿಕಾ, ದ.ಕ.ಜಿಲ್ಲಾ ತರಬೇತಿ ಸಂಸ್ಥೆ ಸುರತ್ಕಲ್ ನ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್, ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಬೆಂಗಳೂರು ಆರೋಗ್ಯ ಸೌಧದ ಆರೋಗ್ಯ ಶಿಕ್ಷಣಾಧಿಕಾರಿ ಜ್ಞಾನೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ ಪ್ರಸಾದ್ ಮತ್ತು ನಾಗೇಂದ್ರ ಪ್ರಸಾದ್ ಮತ್ತು ಡಾ.ದೀಪಿಕಾ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ.ಉಳೆಪಾಡಿ ಸ್ವಾಗತಿಸಿದರು. ಮೈಸೂರು ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಮೈಸೂರು ವಿಭಾಗವು 8 ಜಿಲ್ಲೆಗಳಿಂದ ಕೂಡಿದ್ದು ಪ್ರತಿಯೊಂದು ಜಿಲ್ಲೆಯೂ ವಿಶೇಷತೆಯನ್ನು ಹೊಂದಿದೆ. 699 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಒಂದು ಕೋಟಿಯ ಮೂವತ್ತೊಂದು ಲಕ್ಷದ ನಲವತ್ತೈದು ಸಾವಿರ ಜನಸಂಖ್ಯೆ ಹೊಂದಿರುವ ಈ ವಿಭಾಗದಿಂದ ಪ್ರತಿವರ್ಷವೂ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವಿವಿಧ ಪ್ರಕಾರಗಳ ಸಮಸ್ಯೆಗಳಿಗೆ ಅನುಗುಣವಾಗಿ ಬೀದಿನಾಟಕಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ ಎಂದರು.