ಸಿದ್ದಾಪುರದಲ್ಲಿ ಅಮಿತ್ ಷಾ ರೋಡ್ ಶೋ : ಗುರುರಾಜ್ ಗಂಟಿಹೊಳೆ ಪರ ಭರ್ಜರಿ ಪ್ರಚಾರ

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಭರ್ಜರಿಯಾಗಿ ಪ್ರಚಾರ ನಡೆಸಿದರು.
ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಅಮಿತ್ ಶಾ, ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಅದರಲ್ಲೂ, “ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಹೇಳಿದರು.

ಅಮಿತ್ ಷಾ ರೋಡ್ ಶೋ ಹಿನ್ನೆಲೆ ಅಂಪಾರು-ಸಿದ್ದಾಪುರ ರಾಜ್ಯ ಹೆದ್ದಾರಿಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಪೂರ್ಣ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತ -ಮುತ್ತ ಹಾಕಿರುವ ಬ್ಯಾರಿಕೇಡ್ ನೋಡಿ ಸಿಡಿಮಿಡಿಗೊಂಡ ಅಮಿತ್ ಷಾ ಅವರು ತಡೆ ತೆಗೆದು ಜನರನ್ನು ಒಳ ಬಿಡುವಂತೆ ಪೆÇಲೀಸರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕ್ಷೇತ್ರದ ಉಸ್ತುವಾರಿ ಬ್ರಿಜೇಶ್ ಚೌಟ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
