ಭಾರತದ 508 ರೈಲು ನಿಲ್ದಾಣ ಪುನರಾಭಿವೃದ್ಧಿ: ಪ್ರಧಾನಿ ಮೋದಿ ಚಾಲನೆ
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ ಭಾರತದಾದ್ಯಂತ 508 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕದ ಮಂಗಳೂರು, ಅರಸೀಕೆರೆ, ಹರಿಹರ ಸೇರಿ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
“ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ತನ್ನ ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ. ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ” ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು. ಯೋಜನೆಯಡಿ ಮಂಗಳೂರಿನ ಪಡೀಲ್ ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ 19.32 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಯಾಗಲಿದೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ| ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀ ನಿವಾಸ ಪೂಜಾರಿ, ಪ್ರತಾಪ ಸಿಂಹ ನಾಯಕ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಕಾರ್ಪೋರೇಟರ್ ಶೋಭಾ ಪೂಜಾರಿ, ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗದ ಡಿಆರ್ ಎಂ ಆರ್. ಮುಕುಂದ್ ಮೊದಲಾದವರು ಉಪಸ್ಥಿತರಿದ್ದರು.