ಅಮೃತ ವಿದ್ಯಾಲಯಂನಲ್ಲಿ ಮನಿಷಾ ಶೆಟ್ಟಿ ಅವರಿಂದ ವಿಶೇಷ ಉಪನ್ಯಾಸ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಮಂಗಳೂರಿನ ಅಮೃತ ವಿದ್ಯಾಲಯಂ ನಲ್ಲಿ
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಬಹುಮುಖ ಪ್ರತಿಭೆಯೊಂದಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಬಲ್ಲ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಂಪನ್ಮೂಲ ವ್ಯಕ್ತಿಗಳಿಂದ ದಿನಾಂಕ 9-12-2025 ರಂದು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕರಾವಳಿ ಕರ್ನಾಟಕದ ಮಾತಾಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಾಯುಪಡೆಯ ಸಾರಿಗೆ ದಳದ ಪೈಲೆಟ್ ಮನಿಷಾ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ವಾಯುಪಡೆಯ ಸೇವಾ ಅನುಭವಗಳು ಮತ್ತು ವಿದ್ಯಾರ್ಥಿಗಳಿಗೆ ದೇಶದ ಸೇವೆಗಾಗಿ ಇರುವ ಸುವರ್ಣಾವಕಾಶಗಳ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಉಪನ್ಯಾಸ ನೀಡಿದರು.

ಇಂಡಿಯನ್ ಕೋಸ್ಟ್ ಗಾರ್ಡ್ ನ ಅಸಿಸ್ಟೆಂಟ್ ಕಮಾಂಡೆಂಟ್ ಪ್ರಿಯಾ ರವರು NCC ಸೇರುವುದರಿಂದ ಆಗುವ ಉಪಯೋಗಗಳು ಹಾಗೂ ಭವಿಷ್ಯದ ಉಜ್ವಲ ಅವಕಾಶಗಳ ಬಗ್ಗೆ ಸ್ಪೂರ್ತಿ ತುಂಬುವ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಲ್ಪನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು ಸಂಶಯ ನಿವಾರಿಸಬಲ್ಲ ಸೂಕ್ತ ಉತ್ತರವನ್ನು ಪಡೆದರು.

ವಾಯು ಪಡೆಯ ತಂತ್ರಜ್ಞಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಯಶವಂತ ಗೋಪಾಲ್ ಶೆಟ್ಟಿ ಅಮೃತ ವಿದ್ಯಾಲಯಂನ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ಕಾರ್ಯಕ್ರಮದ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025 ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿದ NCC ಕೆಡೆಟ್ ಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಮಧುಲಿಖಾ , ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಸದಸ್ಯರಾದ ದಿಲೀಪ್, ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಸೋಮಶೇಖರ್,ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಅರ್ಪಿತಾ ಮಹೇಶ್ ಅವರು ನೆರವೇರಿಸಿ ಕೊಟ್ಟರು. ಶಿಕ್ಷಕಿ ಶರ್ಮಿಳಾ ಅವರು ಧನ್ಯವಾದಗಳನ್ನು ಅರ್ಪಿಸಿದರು.


















