ಬಹರೈನ್: “ಮೊಗವೀರ್ಸ್ ಬಹರೈನ್ ” ಸಂಘಟನೆಯಿಂದ “ಅಟಿಲ್” ಆಹಾರೋತ್ಸವ

ಬಹರೈನ್ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹರೈನ್ ” ಸಂಘಟನೆಯು “ಅಟಿಲ್” ಎನ್ನುವಂತಹ ವಿಶಿಷ್ಟ ಆಹಾರಗಳ ಮೇಳವನ್ನು ಬಹರೈನ್ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಆಯೋಜಿಸಿದ್ದರು.

“ಮೊಗವೀರ್ಸ್ ಬಹರೈನ್ ” ಸಂಘಟೆನೆಯ ಸ್ಥಾಪಕ ಸದಸ್ಯರೂ, ಸಂಘಟೆನೆಯ ಉಪಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿ ಅಪಾರ ಮಿತ್ರ ಗೆಳೆಯರ ಬಳಗವನ್ನು ಹೊಂದಿ ಅಕಾಲಿಕ ನಿಧನ ಹೊಂದಿದ್ದ ದಿವಂಗತ ತೀರ್ಥ ಸುವರ್ಣರವರ ಸ್ಮರಣಾರ್ಥ ಈ “ಅಟಿಲ್ ” ಕಾರ್ಯಕ್ರಮವನ್ನು “ಮೊಗವೀರ್ಸ್ ಬಹರೈನ್ ” ಸಂಘಟೆನೆಯು ಆಯೋಜಿಸಿತ್ತು.

ಕಾರ್ಯಕ್ರಮದ ಮೊದಲಿಗೆ ಮೊಗವೀರ್ಸ್ ಬಹರೈನ್ ನ ಉಪಾಧ್ಯಕ್ಷರಾದ ಶಿಲ್ಪಾ ಶಮಿತ್ ಕುಂದರ್ ರವರು ಪ್ರಾಸ್ತಾವಿಕ ಮಾತನಾಡಿದರು. ನಂತರ ದಿವಂಗತ ತೀರ್ಥ ಸುವರ್ಣ ರವರ ಸ್ಮರಣಾರ್ಥ ಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

ದಿವಂಗತ ತೀರ್ಥ ಸುವರ್ಣರವರ ಧರ್ಮಪತ್ನಿ ಸುರೇಖಾ ಸುವರ್ಣ ರವರು ರಿಬ್ಬನ್ ಕತ್ತರಿಸಿ “ಅಟಿಲ್” ಆಹಾರೋತ್ಸವವಕ್ಕೆ ಚಾಲನೆ ನೀಡಿದರು. ಆಹಾರೋತ್ಸವದಲ್ಲಿ ಹೆಚ್ಚಾಗಿ ರುಚಿಯಾದ ಸಾಂಪ್ರದಾಯಿಕ ಗ್ರಾಮೀಣ ಆಹಾರ ಪದಾರ್ಥಗಳು ಹೆಚ್ಚಾಗಿ ಕಂಡು ಬಂದಿದ್ದು ನೆರೆದವರು ಮತ್ತೆ ಮತ್ತೆ ಸವಿದು ಬಾಯಿಚಪ್ಪರಿಸುವಂತೆ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ವಿವಿಧ ರೀತಿಯ ಮನೋರಂಜನಾತ್ಮಕ ಆಟಗಳು ಆಹಾರೋತ್ಸವವಕ್ಕೆ ಹೆಚ್ಚಿನ ಆಕರ್ಷಣೆ ನೀಡಿತ್ತು.

ಇದೇ ಕಾರ್ಯಕ್ರಮದಲ್ಲಿ ದಿವಂಗತ ತೀರ್ಥ ಸುವರ್ಣರವರ ಧರ್ಮಪತ್ನಿ ಶ್ರೀಮತಿ ಸುರೇಖಾ ಸುವರ್ಣ, ಮಂಗಳೂರು ಅಸೋಸಿಯೇಷನ್ ಓಫ್ ಸೌದಿ ಅರೇಬಿಯಾದ ಪ್ರಥಮ ಅಧ್ಯಕ್ಷ ಕರುಣಾಕರ್ ಸಾಲ್ಯಾನ್ ಹಾಗು ಧರ್ಮಪತ್ನಿ ವಿಜಯಲಕ್ಷ್ಮಿ ಸಾಲ್ಯಾನ್, ಮೊಗವೀರ್ಸ್ ಬಹರೈನ್‍ನ ಮಾಜಿ ಅಧ್ಯಕ್ಷ ಗಿರೀಶ್ ಇಡ್ಯಾ ಹಾಗು ಅವರ ಧರ್ಮಪತ್ನಿ ಸಂಗೀತ ಗಿರೀಶ್ , ಗೀತಾ ಜಗನ್ನಾಥ್ ಸುವರ್ಣ ಕಾಪು ಅವರುಗಳನ್ನು ಮೊಗವೀರ್ಸ್ ಬಹರೈನ್ ಸಂಘಟನೆಗಾಗಿ ನೀಡಿರುವ ಗಣನೀಯ ಕೊಡುಗೆಗಾಗಿ ಶಾಲು ಹೊದಿಸಿ ಸ್ಮರಣಿಕೆಗಳನಿಟ್ಟು ಸಮ್ಮಾನಿಸಲಾಯಿತು. ರುಚಿ ಶುಚಿಯಾದ ಆಹಾರವನ್ನು ತಯಾರಿಸಿ ತಂದಿರುವ ಎಲ್ಲಾ ಮಹಿಳೆಯರಿಗೂ ಪುರುಷರಿಗೂ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

ಸುರೇಖಾ ಸುವರ್ಣರವರು ಮಾತನಾಡಿ ತಮ್ಮ ಪತಿಯ ಸ್ಮರಣಾರ್ಥ ಆಯೋಜಿಸಿರುವ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿ ಕೃತಜ್ಞತೆಗಳನ್ನು ಸಲ್ಲಿಸಿದರೆ, ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ ,ರವಿ ಕರ್ಕೇರ ಮುಂತಾದವರು ಮಾತನಾಡಿ ದಿವಂಗತ ತೀರ್ಥ ಸುವರ್ಣರವರ ಗುಣಗಾನ ಮಾಡಿ, ಈ ಕಾರ್ಯಕ್ರಮವು ಅವರಿಗೆ ಅರ್ಪಿಸುತ್ತಿರುವ ಅರ್ಥಪೂರ್ಣವಾದ ಗೌರವವಾಗಿದೆ. ಮೊಗವೀರ್ಸ್ ಬಹರೈನ್ ಸಂಘಟನೆಯ ಕಾರ್ಯವೈಖರಿ ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಮೊಗವೀರ್ಸ್ ಬಹರೈನ್ ನ ಅಧ್ಯಕ್ಷರಾದ ಸುಧಾಕರ್ ಆನಗಳ್ಳಿ,ಉಪಾಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಮೆಂಡನ್, ಖಜಾಂಚಿ ಕೋದಂಡರಾಮ ಸಾಲ್ಯಾನ್, ಗೌರವಾಧ್ಯಕ್ಷ ಚಂದ್ರ ಮೆಂಡನ್, ಮೊಗವೀರ್ಸ್ ಬಹರೈನ್‍ನ ಹಿರಿಯ ಸದಸ್ಯ ರಂಜನ್ ಸಾಲ್ಯಾನ್, ಮಾಜಿ ಅಧ್ಯಕ್ಷರಾದಂತಹ ಗಿರೀಶ್ ಇಡ್ಯಾ,ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ, ಸೌದಿ ಅರೇಬಿಯಾದ “ಮಾಸ ” ಸಂಘಟನೆಯ ಅಧ್ಯಕ್ಷ ಗೋಪಾಲ್ ಶೆಟ್ಟಿ ,”ಮಾಸ”ಸಂಘಟನೆಯ ಸ್ಥಾಪಕ ಸದಸ್ಯರಾದ ರವಿ ಕರ್ಕೇರ, ಪಟ್ಲಾ ಪೌಂಡೇಶನ್ ಬಹರೈನ್ ಸೌದಿ ಘಟಕದ ಅಧ್ಯಕ್ಷರಾದ ನರೇಂದ್ರ ಶೆಟ್ಟಿ, ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಮೊಗವೀರ್ಸ್ ಬಹರೈನ್‍ನ ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ ರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರೆ ಕಮಲಾಕ್ಷ ಅಮೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.