ಕನ್ನಡ ಸಂಘ ಬಹರೈನ್ ವತಿಯಿಂದ, ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗೆ ಸಮ್ಮಾನ
ಬಹರೈನ್ ಕನ್ನಡ ಸಂಘ ಕೇವಲ ಕನ್ನಡಿಗರ ಸಂಘಟನೆಯಲ್ಲ ಇದು ಕನ್ನಡ ಕಲೆ, ಸಂಸ್ಕ್ರತಿ ,ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ ಒಂದು ಪರಿಣಾಮಕಾರಿಯಾದ ಮಾಧ್ಯಮ. ಇಲ್ಲಿರುವ ನಮ್ಮ ಸಂಸ್ಕ್ರತಿಯ ಅಧ್ಯಯನ ಕೇಂದ್ರಗಳು ನಿಜವಾಗಿಯೂ ಕನ್ನಡ ಭಾಷೆ, ಕಲೆ, ಸಂಸ್ಕ್ರತಿಯ ಮೇಲೆ ಬಹರೈನ್ ಕನ್ನಡಿಗರಿಗಿರುವ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ ” ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.
ಅವರು, ಕನ್ನಡ ಸಂಘವು ಸಭಾಧ್ಯಕ್ಷರ ಬಹರೈನ್ ಭೇಟಿಯ ಸಂದರ್ಭದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಮ್ಮಾನವನ್ನು ಸ್ವೀಕರಿಸಿ ಮಾತುಗಳನ್ನಾಡಿದರು. ಸಭಾಧ್ಯಕ್ಷರು ಹೊಸದಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ಕನ್ನಡಿಗರಿಗಾಗಿ ಕಲ್ಪಿಸಿರುವ ವಿವಿಧ ಅಧ್ಯಯನ ಕೇಂದ್ರಗಳು, ಕನ್ನಡ ತರಗತಿ ಮುಂತಾದವುಗಳನ್ನು ನೋಡಿ ಕನ್ನಡ ಸಂಘದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರನ್ನು ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಹಾಗೂ ಪದಾಧಿಕಾರಿಗಳು ಅತಿಥಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಿದರು. ಇದೇ ವೇದಿಕೆಯಲ್ಲಿ ಇಲ್ಲಿನ ಹಾಗು ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಯು.ಟಿ. ಖಾದರ್ ರವರನ್ನು ತಮ್ಮ ಪ್ರೀತಿ, ವಿಶ್ವಾಸ, ಅಭಿಮಾನದ ದ್ಯೋತಕವಾಗಿ ಶಾಲು ಹೊದಿಸಿ, ಸ್ಮರಣಿಕೆಗಳನ್ನಿತ್ತು ಸಮ್ಮಾನಿಸಿದರು.
ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಯವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಘದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದರೆ, ಬಹರೈನ್ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಹಿರಿಯ ಉದ್ಯಮಿ ಮೊಹಮ್ಮದ್ ಮನ್ಸೂರ್, ಸೌದಿಅರೇಬಿಯದ ಉದ್ಯಮಿ ಶೇಖ್ ಕರ್ನಿರೆ ಔಪಚಾರಿಕವಾಗಿ ಮಾತನಾಡಿ ಸಂಘದ ಚಟುವಟಿಕೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಹರೈನ್ ಕ್ರಿಕೆಟ್ ಫೆಡರೇಷನ್ ನ ಸಲಹಾ ಮಂಡಳಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಮನ್ಸೂರ್ ,ಸೌದಿ ಅರೇಬಿಯಾದ ಜನಪ್ರಿಯ ಕನ್ನಡಿಗ ಉದ್ಯಮಿ ಎಕ್ಸ್ಪರ್ ಟೈಸ್(expertise )ಸಂಸ್ಥೆಯ ಉಪಾಧ್ಯಕ್ಷರಾದ ಶೇಖ್ ಕರ್ನಿರೆ ,ಕನ್ನಡ ಸಂಘದ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವವನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮಪ್ರಸಾದ್ ಅಮ್ಮೆನಡ್ಕ ರವರು ನಿರೂಪಿಸಿ ಧನ್ಯವಾದ ಸಮರ್ಪಿಸಿದರು.