ಬಂಟ್ವಾಳ:ಜಾತಿ ಗಣತಿಗೆ ಹೋದ ಶಿಕ್ಷಕನ ಮೇಲೆ ಜೇನುನೊಣ ದಾಳಿ

ಬಂಟ್ವಾಳ: ಜಾತಿ ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕರೋರ್ವರು ಜೇನು ನೊಣದ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆ ಸಜೀಪಮುನ್ನೂರು ಗ್ರಾಮದ ಆಲಾಡಿ ಬಳಿ ಶನಿವಾರ ನಡೆದಿದೆ. ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ವೆಂಕಟರಮಣ ಆಚಾರ್ ಜೇನು ನೊಣದ ದಾಳಿಗೊಳಗಾಗಿದ್ದು ಚೇತರಿಸಿಕೊಂಡಿದ್ದಾರೆ.


ಶಿಕ್ಷಣ ವೆಂಕಟರಮಣ ಆಚಾರ್ ಅವರು ಸಜೀಪಮುನ್ನೂರು ಗ್ರಾಮದ ಆಲಾಡಿ, ಶಾರಾದನಗರದ ಬಳಿ ಗಣತಿ ಕಾರ್ಯಕ್ಕೆ ತೆರಳಿದ್ದ ವೇಳೆ ಅಲ್ಲಿನ ಪಿಲಿಚಂಡಿ ದೈವಸ್ಥಾನದ ರಸ್ತೆ ಬಳಿಯ ಗುಳಿಗ ಸ್ಥಾನದ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ನಿಂತಿದ್ದ ವೇಳೆ ಏಕಾಏಕಿ ಜೇನು ನೊಣಗಳು ದಾಳಿ ಮಾಡಿದೆ. ತಲೆ, ಕೈಗೆ ನೊಣಗಳು ಕಚ್ಚಿದಾಗ ಸ್ಥಳೀಯ ಮನೆಯೊಂದಕ್ಕೆ ಓಡಿ ಹೋದ ವೆಂಕಟರಮಣ ಆಚಾರ್ ಅವರು ೨೦ ನಿಮಿಷಗಳ ಕಾಲ ಮನೆಯಲ್ಲಿ ಸುಧಾರಿಸಿ, ಗಾಯಗಳಿಗೆ ಅರಶಿನ ಹಚ್ಚಿಕೊಂಡು ಇನ್ನೇನು ನೊಣಗಳು ಹೋಯಿತೆಂದು ವಾಪಸ್ಸು ತನ್ನ ವಾಹನದತ್ತ ಬಂದಾಗ ಮತ್ತೆ ಜೇನು ನೊಣಗಳ ಹಿಂಡು ದಾಳಿ ನಡೆಸಿ ತಲೆ, ಕಿವಿ, ಕುತ್ತಿಗೆಗೆ ಕಚ್ಚಿ ಗಂಭೀರ ಗಾಯಗೊಳಿಸಿ ಬೆನ್ನಟ್ಟಿದೆ. ಆತಂಕ ಗೊಂಡ ಅವರು ತನ್ನ ವಾಹನದಲ್ಲಿ ಸಜೀಪಮೂಡ ಗ್ರಾಮದ ಸುಭಾಷ್‌ನಗರದತ್ತ ಬಂದಿದ್ದು ಅಲ್ಲಿವರೆಗೂ ಅಂದರೆ ಸುಮರು ಎರಡೂವರೆ ಕಿ.ಮಿ. ದೂರದವರೆಗೂ ನೊಣಗಳು ಅಟ್ಟಾಡಿಸಿಕೊಂಡು ಬಂದಿದೆ. ಬಳಿಕ ಮನೆಗೆ ಹೋದ ಅವರಿಗೆ ಅವರ ಪತ್ನಿ ನೊಣದ ಮುಳ್ಳುಗಳನ್ನು ತೆಗೆದು ಆರೈಕೆ ಮಾಡಿದ್ದಾರೆ. ಘಟನೆಯಿಂದ ವೆಂಟಕರಮಣ ಆಚಾರ್ ಅವರ ಮುಖ, ಕೈ ಊದಿಕೊಂಡಿದ್ದು ೨೫ಕ್ಕಿಂತಲೂ ಅಧಿಕ ನೊಣದ ಮುಳ್ಳುಗಳನ್ನು ತೆಗೆಯಲಾಗಿದೆ. ವೆಂಕಟರಮಣ ಆಚಾರ್ ಬಂದ ಬಳಿಕ ಅದೇ ಸ್ಥಳದಲ್ಲಿ ನಾಲೈದು ಮಂದಿಗೆ ಜೇನು ನೊಣಗಳು ಕಚ್ಚಿ ಗಾಯಗೊಳಿಸಿದೆ. ಆರು ವರ್ಷದ ಹಿಂದೆ ಇದೇ ಜಾಗದಲ್ಲಿ ಜೇನು ನೊಣಗಳ ದಾಳಿಯಾಗಿ ಐದಾರು ಮಂದಿ ಸಾವು ಬದುಕಿನ ನಡುವೆ ಹೋರಾಡಿದ ಘಟನೆಯ ಬಗ್ಗೆ ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ಗಾಯಾಳು ಶಿಕ್ಷಕ ವೆಂಕಟರಮಣ ಆಚಾರ್ ಅವರ ಮನೆಗೆ ಡಿಡಿಪಿಐ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಬಿತಾ ಹಾಗೂ ಇಲಾಖಾಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಕೆಲವು ದಿನದ ಹಿಂದೆ ತಾಲೂಕಿನಲ್ಲಿ ಗಣತಿ ಕಾರ್ಯಕ್ಕೆ ಹೋದ ಶಿಕ್ಷಕರಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆಯೂ ನಡೆದಿದೆ.

ಶನಿವಾರ ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕರಿಗೆ ಜೇನ್ನೊಣ ಕಡಿತವಾಗಿ ಗಾಯಗಳುಂಟಾಗಿದ್ದು, ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇಬ್ಬರು ಶಿಕ್ಷಕರ ಮೇಲೆ ನಾಯಿ ದಾಳಿ ಆದ ಘಟನೆಯೂ ನಡೆದಿತ್ತು. ಅವರಿಗೆ ಮೇಲಧಿಕಾರಿಗಳ ಸೂಚನೆಯಂತೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗಿದ್ದು, ಆರೋಗ್ಯ ಸುರಕ್ಷತೆಯ ಗಮನದಲ್ಲಿರಿಸಿ ಗಣತಿ ಕಾರ್ಯವನ್ನು ಇತರರಿಗೆ ವಹಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಇದುವರೆಗೆ ಶೇ.೮೮ರಷ್ಟು ಗಣತಿ ಕಾರ್ಯ ಮುಗಿದಿದ್ದು, ಪ್ರಗತಿಯಲ್ಲಿದೆ.- ಬಬಿತಾ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

Related Posts

Leave a Reply

Your email address will not be published.