ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಹತ್ಯೆಗೆ ಸಂಚು.!
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯಲ್ಲಾದ ಭ್ರಷ್ಟಾಚಾರವನ್ನು ಬಯಲು ಮಾಡಿದ ದ್ವೇಷದಲ್ಲಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರ ಹತ್ಯೆಗೆ ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪದ್ಮನಾಭ ಸಾಮಂತ್ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
2018-2023 ನೇ ಸಾಲಿನಲ್ಲಿ ನಡೆದ ಬಂಟ್ವಾಳ ತಾಲೂಕಿನ ಅಕ್ರಮ-ಸಕ್ರಮದ ಭೂ ಮಂಜೂರಾತಿಗಳ ಭ್ರಷ್ಟಾಚಾರವನ್ನು ಪದ್ಮನಾಭ ಸಾಮಂತ ಬಯಲು ಮಾಡಿದ್ದರು.
ಈ ಬಗ್ಗೆ ಸರಕಾರದ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿಯವರು ಎಸಿಯವರ ಮೂಲಕ ತನಿಖೆಗೆ ಆದೇಶಿಸಿದ್ದರು. ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಇದೀಗ ಕೊಲೆಗೆ ಸಂಚು ನಡೆಸಲಾಗಿದೆ.
ಆಕ್ರಮವಾಗಿ ಭೂಮಿ ಮಂಜೂರಾತಿಗೊಳಿಸಿಕೊಂಡಿದ್ದ ಉದಯ ಪೂಜಾರಿ ಪಾಂಡವರ ಗುಡ್ಡೆ ಕೊಯಿಲ ಹಾಗೂ ಆತನ ಸಹಚರ ಉದಯ ಶೆಟ್ಟಿ ಸಿದ್ದಕಟ್ಟೆ ಪರನೀರು ಇವರು ಪದ್ಮನಾಭ ಸಾಮಂತ್ ರವರ ಹತ್ಯೆಗೆ ಉತ್ತರಪ್ರದೇಶದ ಯುವಕರನ್ನು ಸೆಟ್ ಮಾಡಿರುವುದು ಬಹಿರಂಗಗೊಂಡಿದೆ. ಮುಂದಿನ ದಿನಗಳಲ್ಲಿ ತನಗೇನಾದರೂ ತೊಂದರೆಯಾದರೆ 2018-2023ನೇ ಸಾಲಿನ ಬಂಟ್ವಾಳದ ಅಕ್ರಮ ಸಕ್ರಮ ಸಮಿತಿ, ಶಾಸಕರು, ಅಧಿಕಾರಿವರ್ಗದವರು ಹಾಗೂ ಸರಕಾರವೇ ನೇರ ಹೊಣೆ ಎಂದು ಪದ್ಮನಾಭ ಸಾಮಂತ ಅವರು ಪುಂಜಾಲಕಟ್ಟೆ ಪೆÇೀಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.