ಬಂಟ್ವಾಳ: ಕಾಂಗ್ರೆಸ್ ವತಿಯಿಂದ ಕರಾವಳಿ ಪ್ರಜಾಧ್ವನಿ ಯಾತ್ರೆ

ಬಂಟ್ವಾಳ: ಕರ್ನಾಟಕವನ್ನು ಸಾಮಾಜಿಕ ಸಾಮರಸ್ಯದ, ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಕಾಂಗ್ರೆಸ್ ಆಡಳಿತದ ಸರಕಾರವನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆಯುತ್ತಿರುವ ಕರಾವಳಿ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಗ್ಗ, ಕಾರಿಂಜ ಕ್ರಾಸ್ ಜಂಕ್ಷನ್‌ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತ ಪಕ್ಷವಾದ ಬಿಜೆಪಿ ಏನೇನು ಕಾರ್ಯಕ್ರಮ ನೀಡಿದೆ ಮತ್ತು ಹಿಂದೆ ಕಾಂಗ್ರೆಸ್ ಸರಕಾರ ನಡೆಸಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಪ್ರಜೆಗಳಿಗೆ ತಿಳಿಸುವುದೇ ಪ್ರಜಾಧ್ವನಿ ಯಾತ್ರೆಯ ಉದ್ದೇಶವಾಗಿದೆ. ನೈಜ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಾಗದೆ ಜನರನ್ನು ಜಾತಿ ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಎಐಸಿಸಿ ಕಾರ್ಯದರ್ಶಿ, ಕೇರಳ ಶಾಸಕ ರೋಜ್ ಎಂ. ಜಾನ್ ಮಾತನಾಡಿ, ಜನತೆ ಕರ್ನಾಟಕದಲ್ಲಿ ಬದಲಾವಣೆ ಬಯಸಿದ್ದಾರೆ. ನಾವು ತಿನ್ನುವುದಿಲ್ಲ, ಯಾರಿಗೂ ತಿನ್ನಲೂ ಬಿಡುವುದಿಲ್ಲ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ೪೦ ಶೇಕಡ ಕಮಿಷನ್ ಪಡೆಯುತ್ತಿದೆ. ನಾವು ಜಾತಿ, ಧರ್ಮದಲ್ಲಿ ಜನರನ್ನು ವಿಭಾಗಿಸುವುದಿಲ್ಲ, ಬದಲಾಗಿ ಅಭಿವೃದ್ದಿ ಕಾರ್ಯದ ಮೂಲಕ ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಕಳೆದ ೫೦ ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಶಾಸಕನಾಗಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಆಮಿಷಗಳಿಗೆ ಬಲಿಯಾಗದೆ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರು ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ಅಡುಗೆ ಅನಿಲ ಸಹಾಧನವಾಗಿ ಗೃಹಲಕ್ಷಿ ಭಾಗ್ಯ, ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಮೊದಲಾದ ನಾಲ್ಕು ಕೊಡುಗೆಗಳನ್ನು ಚುನಾವಣೆಗೆ ಮುಂಚಿತವಾಗಿಯೇ ನೀಡುವ ಭರವಸೆ ನೀಡಿದೆ. ಸಧ್ಯ ಪ್ರಣಾಳಿಕೆಯಲ್ಲಿ ಕರಾವಳಿ ಮತ್ತು ಮಲೆನಾಡಿಗೆ ವಿಶೇಷ ಕೊಡುಗೆಗಳನ್ನು ನೀಡಿದೆ ಎಂದರು. ಈ ಸಂದರ್ಭ ಬಿಜೆಪಿ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು

ರಾಜ್ಯ ಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್. ರೋಡ್ರಿಗಸ್
ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್. ಮಹಮ್ಮದ್, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಬ್ಬಾಸ್ ಅಲಿ, ಪಂಚಾಯತ್ ರಾಜ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಬಂಟ್ವಾಳ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಲವೀನಾ ವಿಲ್ಮಾ ಮೋರಸ್, ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಸುರೇಶ್ ಜೋರ, ಇಬ್ರಾಹಿಂ ನವಾಝ್ , ಇಸ್ಮಾಯಿಲ್ ಸಿದ್ದಿಕ್, ಪಿ. ಜಿನರಾಜ ಅರಿಗ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷೆ ರಜನಿ ಬಾಬು ಕುಲಾಲ್ ಉಪಸ್ಥಿತರಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು, ರಾಜೀವ ಶೆಟ್ಟಿ ಎಡ್ತೂರು, ಜಗದೀಶ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.ಚಂದ್ರಶೇಖರ ಕರ್ಣ ವಂದಿಸಿದರು.