ಬಂಟ್ವಾಳ: ನೀರಪಾದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೃಷಿ ಪ್ರೇಮ

ಬಂಟ್ವಾಳ: ಬಾಳ್ತಿಲ ಗ್ರಾಮದ ನೀರಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿ, ಬಳಿಕ ಸ್ಥಳೀಯ ಗದ್ದೆಯೊಂದರಲ್ಲಿ ಬತ್ತದ ನೇಜಿ ನಾಟಿ ಮಾಡಿ ಗಮನ ಸೆಳೆದಿದ್ದಾರೆ.

ಶಾಲೆಯ ನಾಲ್ಕು ಗೋಡೆಯ ಮಧ್ಯೆ ಕಲಿಯುವ ವಿದ್ಯೆಯೊಂದಿಗೆ ಪ್ರಕೃತಿಯ ಮಡಿಲಲ್ಲಿ, ಕೆಸರು ಗದ್ದೆಯಲ್ಲಿ ಮೇಟಿ ವಿದ್ಯೆಯನ್ನು ಕರಗತಮಾಡಿಕೊಂಡಿದ್ದಾರೆ.ತುಳುನಾಡಿನಲ್ಲಿ ಬತ್ತದ ಬೇಸಾಯ ಕಡಿಮೆಯಾಗುತ್ತಿದೆ, ಯುವಕರು ಉದ್ಯೋಗ ಅರಸಿಕೊಂಡು ನಗರದತ್ತ ಹೆಜ್ಜೆ ಹಾಕುತ್ತಿದಾರೆ. ಅತೀ ವೃಷ್ಠಿ, ಅನಾವೃಷ್ಠಿ, ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ತ್ತರಿಸಿ ಹೋಗಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಕೆಲವೊಂದು ರೈತರು ಭತ್ತದ ಗದ್ದೆಗಳಲ್ಲಿ ಅಡಿಕೆಯನ್ನು ಬೆಳೆಸುತ್ತಿದ್ದಾರೆ.

ಇನ್ನೂ ಅನೇಕ ಕಡೆಗಳಲ್ಲಿ ಭತ್ತದ ಗದ್ದೆಗಳು ಇದ್ದರೂ ಕೃಷಿ ಚಟುವಟಿಕೆ ನಡೆಯದೆ ಹಡಿಲು ಉಳಿದಿದೆ. ಇದೇ ಪರಿಸ್ಥಿತಿ ಮುಂದಿವರಿದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದುರಾಗಬಹುದು ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಸಾಗುವಳಿ ಮಾಡುವ ಬಗ್ಗೆ ಮಾಹಿತಿಯೊಂದಿಗೆ, ಪ್ರಾಯೋಗಿಕ ಅನುಭವವನ್ನು ನೀಡಿದರೆ ಭತ್ತದ ಬೇಸಾಯ ಉಳಿಸಿ, ಬೆಳೆಸಲು ಸಾಧ್ಯವಿದೆ ಎನ್ನುವ ಉದ್ದೇಶದಿಂದ ಬಾಳ್ತಿಲ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಕೃಷಿ ಕಾರ್ಯಕ್ಕೆ ಸಜ್ಜುಗೊಳಿಸಿದರು.

ಸ್ಥಳೀಯ ರೈತ ಕೋರ್ಯ ಯಾದವ ಬಂಗೇರ ಅವರ ಗದ್ದೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಅನುಭವಿ ರೈತರಿಂದ ಮಕ್ಕಳಿಗೆ ಭತ್ತದ ಸಾಗುವಳಿಯ ಬಗ್ಗೆ ಅರಿವು ಮೂಡಿಸಿದರು. ಶಾಲಾ ವಿದ್ಯಾರ್ಥಿಗಳು ನೇಜಿ ಕೀಳಿ, ಬಳಿಕ ನಾಟಿ ಮಾಡಿ ಪ್ರಾಯೋಗಿಕ ಅನುಭವ ಪಡೆದುಕೊಂಡರು. ರೈತ ದೇಶದ ಬೆನ್ನೆಲುಬು ಎನ್ನುವ ನಾಣ್ಣುಡಿಯಂತೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ನಿಜವಾದ ಮಣ್ಣಿನ ಮಕ್ಕಳೆನೆಸಿಕೊಂಡರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ, ಶಾಲೆಯ ಸಹಶಿಕ್ಷಕ ಸಂತೋಷ್ ಕುಮಾರ್ ತುಂಬೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಚಂದ್ರ ಕೋರ್ಯ, ಶಾಲಾ ಅಭಿವೃದ್ಧಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ವಸಂತ ಸಾಲಿಯಾನ್, ಕೃಷಿಕರಾದ ಕೂಸಪ್ಪ ಪೂಜಾರಿ ಮೊಟ್ಟಿ ಕಲ್ಲು, ಸುರೇಂದ್ರ ಕೋರ್ಯ, ಪ್ರಗತಿಪರ ಯುವ ಕೃಷಿಕ ನಿತಿನ್, 30ಕ್ಕೂ ಹೆಚ್ಚು ಶಾಲಾ ಮಕ್ಕಳು, ಪೆÇೀಷಕರು, ಶಿಕ್ಷಕ ವೃಂದ ಮತ್ತಿತರರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Related Posts

Leave a Reply

Your email address will not be published.