ಸುಡು ಬಿಸಿಲಿನಲ್ಲಿಯೂ ಜಲಸಮೃದ್ಧವಾದ ನರಹರಿ ಪರ್ವತದ ತೀರ್ಥ ಬಾವಿ

ಬಂಟ್ಚಾಳ ತಾಲೂಕಿನ ನರಹರಿ ಪರ್ವತ ಕ್ಷೇತ್ರದಲ್ಲಿ ನಾಲ್ಕು ತೀರ್ಥ ಬಾವಿಗಳು ಸುಡು ಬೇಸಿಗೆಯಲ್ಲೂ ಜಲಸಮೃದ್ದವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಭೂಮಿಯಲ್ಲಿ ನೀರಿನ ಸೆಲೆ ಬರಡಾಗುತ್ತಿದೆ. ನದಿ, ಕರೆ,ಕುಂಟೆ, ಬಾವಿ, ತೊರೆ, ಡ್ಯಾಂಗಳಲ್ಲಿ ನೀರು ಬತ್ತಿ ತಳ ಕಾಣಿಸುತ್ತಿದ್ದರೂ, 350 ಅಡಿ ಎತ್ತರದಲ್ಲಿ ಕರ್ಗಲ್ಲು ಬೆಟ್ಟದ ಮೇಲಿರುವ ನರಹರಿ ಪರ್ವತದ ತೀರ್ಥ ಬಾವಿಗಳು ನೀರಿನಿಂದ ತುಂಬಿ ತುಳುಕುವ ಮುಲಕ ಭಕ್ತಾಧಿಗಳಲ್ಲಿ ಅಚ್ಚರಿ ಮೂಡಿಸುತ್ತಿದೆ.

ಬಂಟ್ಚಾಳ ತಾಲೂಕಿನ ಮೂರು ಗ್ರಾಮಗಳ ಗಡಿ ಸಂಗಮದಂತಿದೆ ನರಹರಿ ಪರ್ವತ ಕ್ಷೇತ್ರ. ಕುರುಕ್ಷೇತ್ರ ಯುದ್ದದ ಬಳಿಕ ಪಾಪವಿಮೋಚನೆಗಾಗಿ ಪಾಂಡವರು ಅಜ್ಞಾತವಾಸ ಕೈಗೊಂಡಿದ್ದಾಗ ಶ್ರೀ ಕೃಷ್ಣನ ಜೊತೆ ನರಹರಿ ಬೆಟ್ಟಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭ ಬೆಟ್ಟದ ಮೇಲೆ ಶ್ರೀ ಸದಾಶಿವ ದೇವರ ಲಿಂಗ ಪ್ರತಿಷ್ಠಾಪಿಸಿ ಅಭಿಷೇಕಕ್ಕೆ ಬೆಟ್ಟದ ಮೇಲೆ ನೀರು ಸಿಗದೇ ಇದ್ದಾಗ ಶ್ರೀ ಕೃಷ್ಣನು ತನ್ನ ಆಯುಧಗಳಾದ ಶಂಖ ಚಕ್ರ ಗಧಾ ಪದ್ಮಗಳಿಂದ ತೀರ್ಥ ಬಾವಿಗಳನ್ನು ನಿರ್ಮಿಸಿದನು ಎನ್ನುವ ಪ್ರತೀತಿ ಇದೆ. ಈ ತೀರ್ಥ ಬಾವಿಯಲ್ಲಿ ಎಂತಹ ಬರಗಾಲ ಬಂದರೂ ನೀರು ಬತ್ತಿಲ್ಲ ಎನ್ನುವುದು ಹಿರಿಯರ ಅಭಿಪ್ರಾಯ. ಆಟಿ ಅಮಾವಾಸ್ಯೆಯ ತೀರ್ಥ ಸ್ನಾನದ ಸಂದರ್ಭ ಬಾವಿಯಲ್ಲಿ ತುಂಬಿರುವಷ್ಠೇ ನೀರು ಈಗಲೂ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ. ನಾಲ್ಕೂ ತೀರ್ಥ ಬಾವಿಗಳಲ್ಲೂ ಭಕ್ತರ ಕೈಗೆ ಸಿಗುವಷ್ಟು ಎತ್ತರದಲ್ಲಿ ನೀರು ತುಂಬಿಕೊಂಡಿದೆ. ದೇವರ ಅಭಿಷೇಕ, ನೈವೇದ್ಯ, ಹಾಗೂ ಭಕ್ತರಿಗೆ ಕುಡಿಯಲೂ ಇಲ್ಲಿನ ಗದಾ ತೀರ್ಥದ ನೀರನ್ನು ಬಳಸಿಕೊಳ್ಳಲಾಗುತ್ತದೆ.

1992ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಸುವ ಸಂದರ್ಭ ಕಾಮಗಾರಿಗೆ ಬಳಸಲು ಈ ಕೆರೆಯ ನೀರನ್ನು ಬಳಸುತ್ತಿದ್ದರು. ಈ ಸಂದರ್ಭ ತೀರ್ಥ ಬಾವಿಯಲ್ಲಿ ನೀರು ಕಡಿಮೆಯಾದರೂ ಕೂಡ ಮರು ದಿನ ಬೆಳಗ್ಗೆ ದೇವರ ಅಭಿಷೇಕಕ್ಕೆ ಬೇಕಾಗುವ ನೀರು ಮತ್ತೆ ಸಂಗ್ರಹವಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಅರ್ಚಕರು. ಒಟ್ಟಿನಲ್ಲಿ ಸುಡು ಬಿಸಿಲಿದ್ದರೂ ಕೂಡ ಎತ್ತರದ ಬಂಡೆಯ ಮೇಲಿರುವ ಬಾವಿಯಲ್ಲಿ ವರ್ಷ ಪೂರ್ತಿ ಒಂದೇ ಮಟ್ಟದಲ್ಲಿ ನೀರು ಇರುವುದು ವಿಶೇಷವಾಗಿದೆ.

Related Posts

Leave a Reply

Your email address will not be published.