ಬಂಟ್ವಾಳ :ನೇತ್ರಾವತಿ ನದಿ ಸೇತುವೆ ಕಾಮಗಾರಿ – ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣ
ಬಂಟ್ವಾಳ : ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸಾಂಗವಾಗಿ ಸಾಗುತ್ತಿದೆ. ಈಗಾಗಲೇ ಎಲ್ಲಾ ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಎರಡು ಫಿಲ್ಲರ್‍ಗಳ ಮಧ್ಯೆ ಬೀಮ್ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಭಾಗವಾಗಿ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದೆ. ನದಿಗೆ ಮಣ್ಣನ್ನು ತುಂಬಿ ಯಂತ್ರಗಳ ಮೂಲಕ ನದಿ ಮಧ್ಯೆ ಹೊಂಡ ತೋಡಿ ಫಿಲ್ಲರ್ ನಿರ್ಮಾಣದ ಕಾರ್ಯ ನಡೆಸಲಾಗಿತ್ತು. ಕ್ರಮೇಣ ಗುತ್ತಿಗೆ ಸಂಸ್ಥೆ ಬದಲಾದ ಕಾರಣ ಸೇತುವೆ ನಿರ್ಮಾಣ ಕಾಮಗಾರಿಯು ನಿಂತಿತ್ತು. ಬಳಿಕ ಚತಿಷ್ಪಥ ಹೆದ್ದಾರಿಯ ಕಾಮಗಾರಿ ಪುನಾರಂಭಗೊಂಡ ಬಳಿಕ ಸೇತುವೆ ಕೆಲಸವೂ ಚುರುಕಿಗೊಂಡಿತ್ತು.
ಅರಂಭದ ಹಂತದಲ್ಲಿ ಪಿಲ್ಲರ್ ನಿರ್ಮಾಣದ ವೇಳೆ ಹಾಕಿದ್ದ ಮಣ್ಣು ಮಳೆಯಿಂದ ನದಿಯಲ್ಲಿ ಹರಿದು ಬಂದ ನೀರಿಗೆ ಕೊಚ್ಚಿ ಹೋಗಿತ್ತು. ಬಳಿಕ ಮತ್ತೆ ಕಾಮಗಾರಿ ಕೈಗೊಳ್ಳಲು ಮಳೆ ಮುಗಿಯುವವರೆಗೆ ಕಾಯಬೇಕಾಯಿತು. ಮಳೆಗಾಲ ನಿಂತ ಬಳಿಕ ಮತ್ತೆ ನದಿಗೆ ಮಣ್ಣು ತುಂಬಿ ಕಾಮಗಾರಿ ಪುನಾರಂಭಿಸಲಾಗಿದೆ.
ಈ ಬಾರಿ ಮಳೆ ವಿಳಂಬವಾದ ಕಾರಣ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಕಾಮಗಾರಿಗೆ ಬೇಕಾದ ಸರಕುಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗಿದೆ. ಇದರಿಂದಾಗಿ ಕೆಲಸವು ಶೀಘ್ರಗತಿಯಲ್ಲಿ ಸಾಗಿದ್ದು ಇನ್ನು ಮಳೆ ಆರಂಭವಾದರೂ ಸೇತುವೆಯ ಉಳಿದ ಕೆಲಸಗಳನ್ನು ನಿರಾಂತಕವಾಗಿ ಮಾಡಬಹುದಾಗಿದೆ.