ಬರ ಪೀಡಿತ ಪ್ರದೇಶಗಳ ಘೋಷಣೆಗೆ ಸರ್ಕಾರದ ಮೀನಾಮೇಷ: ಬೊಮ್ಮಾಯಿ ಆರೋಪ
ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ವಸ್ತುಸ್ಥಿತಿ ವರದಿಯಲ್ಲಿಯೇ ಸರ್ಕಾರ ಮಗ್ನವಾಗಿದೆ. ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಎಂಬ ಮನೋಭಾವ ಈಗಿನ ಸರ್ಕಾರಕ್ಕಿಲ್ಲ. ಜನಪರ ಆಡಳಿತ ಮಾಡುವ ಧೋರಣೆಯೂ ರಾಜ್ಯದ ಸರ್ಕಾರಕ್ಕಿಲ್ಲ. ಕುಂಟು ನೆಪಗಳನ್ನು ಹೇಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಶೀಘ್ರದಲ್ಲಿ ಬರಗಾಲ ಪ್ರದೇಶಗಳನ್ನು ಘೋಸಣೆ ಮಾಡಬೇಕು. ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಮಾಡಬೇಕು. ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಮಾಡಿ ಹೊಸ ಸಾಲ ಕೊಡುವಂತಹ ವ್ಯವಸ್ಥೆ ಮಾಡಬೇಕು. ಸುಮಾರು 25 ಸಾವಿರ ಕೋಟಿ ರೂಪಾಯಿ ಸಾಲ ಕೊಡುವಲ್ಲಿ 7ರಿಂದ 8 ಸಾವಿರ ಕೋಟಿ ಕೊಡುತ್ತಿದ್ದಾರೆ. ರೈತರಿಗೆ ಕೊಡುವ ಸಾಲವನ್ನು ಕೂಡ ಕೂಡಲೇ ಬಿಡುಗಡೆ ಮಾಡಿ, ಆತ್ಮಹತ್ಯೆಯಿಂದ ರೈತರನ್ನು ಉಳಿಸಿಕೊಳ್ಳಬೇಕಾಗಿದೆ. ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.