ವಿಟ್ಲ: ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಸಮುದಾಯ ಭವನಕ್ಕೆ ಶಿಲಾನ್ಯಾಸ

ದಕ್ಷಿಣ ಕನ್ನಡ ಜಿಲ್ಲೆಗೆ ಗೃಹ ಲಕ್ಷ್ಮಿ ಯೋಜನೆಗಾಗಿ 60ಕೋಟಿ ರೂಪಾಯಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ಕುಟುಂಬವನ್ನು ಸದೃಢವಾಗಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಸಮುದಾಯ ಭವನದ ಶಿಲಾನ್ಯಾಸವನ್ನು ನಡೆಸಿ ಮಾತನಾಡಿದರು. ಕ್ರೈಸ್ತ ಅಕಾಡೆಮಿಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಚರ್ಚ್ ಬಳಿಯ ಇಂಟರ್ ಲಾಕ್ ಅಳವಡಿಕೆಗೆ ಹಾಗೂ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಕಾರ್ಯ ಮಾಡಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಸಾಧ್ಯವಾದಷ್ಟು ಅನುದಾನ ನೀಡುವ ಕಾರ್ಯ ಮಾಡಲಾಗುವುದು. ಕೃಷಿಯ ಜತೆಗೆ ಉದ್ಯಮ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಂಗಳೂರು ಪದುವಾ ಕಾಲೇಜು ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊ ಆಶೀರ್ವಚನ ನೀಡಿದರು. ಚರ್ಚ್ ನ ಅಗತ್ಯಗಳಿಗೆ ಸರ್ಕಾರದಿಂದ ಅನುದಾನ ನೀಡುವಂತೆ ಮನವಿಸಲ್ಲಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರುಗಳಾದ ಸೈಮನ್ ಡಿಸೋಜ ವಹಿಸಿದ್ದರು.
ಮಂಗಳೂರು ದಕ್ಷಿಣ ಮಾಜಿ ಶಾಸಕ ಜೆ. ಆರ್. ಲೋಬೊ, ಪೆರುವಾಯಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೆಫೀಸ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಅಳಿಕೆ ಗ್ರಾಮ ಪಂಚಾಯಿತಿ ಪದ್ಮನಾಭ ಪೂಜಾಲ ಸಣ್ಣಗುತ್ತು, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೆಲ್ಸನ್, ಪಾಲನಾ ಪರಿಷತ್ತ್ ಉಪಾಧ್ಯಕ್ಷ ಡೇಸ್ ಮೊಂತೇರೋ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಧೀಕ್ಷಿತಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
