ಭಾರತದ ಅತಿ ಎತ್ತರದ “ಭೀಮಾ” ರೊಬೋಟ್ : ಬಹುಪಯೋಗಿ ರೋಬೋಟ್ ಬಳಕೆಗೆ ಸಿದ್ಧ
ಬೆಂಗಳೂರು, ಜು, 5; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ. ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. “ಭೀಮಾ” 7.7 ಅಡಿ ಎತ್ತರದ ರೋಬೋಟ್ ಆಗಿದ್ದು, ಇದರ ದೇಹಕ್ಕೆ ಎಲ್.ಇ.ಡಿ ತಂತ್ರಜ್ಞಾನದ ಸ್ಪರ್ಷ ನೀಡಲಾಗಿದೆ. ಈ ರೋಬೋಟ್ ಬಹುಪಯೋಗಿಯಾಗಿದ್ದು, ವಿಶೇಷವಾಗಿ ಸ್ವಾಗತಕಾರನ ಪಾತ್ರವನ್ನು ದಕ್ಷತೆಯಿಂದ ನಿರ್ವಹಿಸಲಿದೆ. ಮನುಷ್ಯರು ಕೇಳುವ ಪ್ರಶ್ನೆಗಳಿಗೆ ಇದು ಉತ್ತರಿಸುತ್ತದೆ. ತಿರುಗಾಡುವುದು, ಜನರನ್ನು ಸ್ವಾಗತಿಸುವ ಮತ್ತಿತರ ಕೆಲಸಗಳನ್ನು ನಿರ್ವಹಿಸಲಿದೆ.
ಮೈಸೂರಿನಲ್ಲಿ ಇದನ್ನು ವಿನ್ಯಾಸಗೊಳಿಸಿದ್ದು, ಇದು ಮುಖ ಚಹರೆಯನ್ನು ಗುರುತುಹಿಡಿಯುತ್ತದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾವನ್ನು ಅಳವಡಿಸಲಾಗಿದೆ ಎಂದು ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಸಂಸ್ಥಾಪಕ ಹರ್ಷ ಕಿಕ್ಕೇರಿ ಹೇಳಿದ್ದಾರೆ.
“ಭೀಮಾ” ರೋಬೋಟ್ ಅನ್ನು ಮಾಲ್ ಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕಾರ್ಪೋರೇಟ್ ಕಾರ್ಯಕ್ರಮಗಳಲ್ಲಿ. ಮನೋರಂಜನಾ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ. ಅಷ್ಟೇ ಅಲ್ಲದೇ ಭೀಮಾ ಆಡಳಿತಾತ್ಮಕ ಕೆಲಸಗಳನ್ನು ಸಹ ಸಮರ್ಥವಾಗಿ ನಿರ್ವಹಿಸಲಿದೆ. ಜನರೊಂದಿಗೆ ಸಾಮಾಜಿಕವಾಗಿ ಸಂವಹನ ಮಾಡಲಿದೆ. ವಿವಿಧ ಕಾರ್ಯಕ್ರಮಗಳು, ಸಮ್ಮೇಳನಗಳಲ್ಲಿ ಭೀಮಾ ರೋಬೋಟ್ ಅನ್ನು ಆಕರ್ಷಣೀಯ ಕೇಂದ್ರಬಿಂದುವಾಗಿ ನಿಯೋಜಿಸಬಹುದಾಗಿದೆ. ಚಿತ್ರೀಕರಣಕ್ಕೆ ಅತ್ಯಂತ ಸೂಕ್ತವಾಗಿ ಇದು ಸ್ಪಂದಿಸಲಿದೆ ಎಂದರು.
ಮೆಟಾವರ್ಸ್ ವಲಯದ ಕೌಶಲ್ಯದಲ್ಲಿ ಹಲೋ ವರ್ಲ್ಡ್ ಮುಂಚೂಣಿ ನಾಯಕತ್ವ ವಹಿಸಿದ್ದು, ಈ ರೋಬೋಟ್ ಅನ್ನು ಹರ್ಷ ಕಿಕ್ಕೇರಿ ಮತ್ತು ಶ್ವೇತಾ ಅವರು 2018 ರಲ್ಲಿ ಅನ್ವೇಷಣೆ ಮಾಡಿದರು. ಇವರ ಮಹತ್ವಾಕಾಂಕ್ಷೆಯ ಉತ್ಪನ್ನ ಹಲೋ ಸೂಟ್ ಆಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ವಿಶೇಷ ಪರಿಣತಿಯನ್ನು ಈ ಸಂಸ್ಥೆ ಹೊಂದಿದೆ.