ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ಕಳಿ ಚಂದ್ರಯ್ಯ ಆಚಾರ್ಯ ಮನವಿ

ಬೈಂದೂರು: ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಬೈಂದೂರು  ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಕಳಿ ಚಂದ್ರಯ್ಯ ಆಚಾರ್ಯ ಅವರು ಮನವಿ ಮಾಡಿದ್ದಾರೆ.

ಬೈಂದೂರು ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಮಠ ಮಂದಿರಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ ಸಮುದಾಯದ ದೇವಸ್ಥಾನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಸಹಕರಿಸಿದೆ.  ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರನ್ನು ಬೆಂಬಲಿಸುವುದು ಸೂಕ್ತ ಎಂದು ಅವರು ತಿಳಿಸಿದರು.

ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆ ಕಾಂಕ್ರೀಟೀಕರಣ, ಕಾಂಕ್ರಟ್ ಸೈಡ್ ವಾಲ್, ಶೀಟ್ ಮಾಡು, ಕಚೇರಿ ಹಾಗೂ ಗುರುಗಳ ವಾಸ್ತವ್ಯ ಕಟ್ಟಡ ಹಾಗೂ ಸಭಾಂಗಣಕ್ಕೆ 2 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಬಿಜೆಪಿ ಸರಕಾರ ಒದಗಿಸಿದೆ. ಇದರ ಜೊತೆಗೆ ಸಭಾಂಗಣದ ಮುಂದುವರಿದ ಕಾಮಗಾರಿಗೆ ಒಂದುವರೆ ಕೋಟಿ ರೂಗಳ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿದ್ದು, ಸಂಸದರಾದ ಬಿ. ವೈ. ರಾಘವೇಂದ್ರ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಸರಕಾರವು ಸಾಕಷ್ಟು ಅನುದಾನದ ಜೊತೆಗೆ ಸಕಾರಾತ್ಮಕ ಸ್ಪಂದನೆಯನ್ನು ನೀಡಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದವರು ಇವುಗಳನ್ನು ಪರಿಶೀಲಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಗ್ರಾ. ಪಂ ಸದಸ್ಯ ಕರುಣಾಕರ ಆಚಾರ್ಯ ಮರವಂತೆ, ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು, ಬೈಂದೂರು ಬಿಜೆಪಿ ಚುನಾವಣಾ ಮಾಧ್ಯಮ ಉಸ್ತುವಾರಿ ಶ್ರೀ ಗಣೇಶ್ ಗಾಣಿಗ  ಉಪಸ್ಥಿತರಿದ್ದರು.

Related Posts

Leave a Reply

Your email address will not be published.