ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಬೆಳಕಿಗಾಗಿ ಪರದಾಟ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರಭಾಗ ಸೇರಿದಂತೆ ಹೇರೂರಿನಿಂದ ಉಪ್ಪಿನಕೋಟೆ ತನಕ ಕೇಂದ್ರ ಭಾಗದಲ್ಲಿ ಚತುಷ್ಪಥ ರಸ್ತೆಗೆ ಹೆದ್ದಾರಿ ಇಲಾಖೆಯಿಂದ ಬೆಳಕಿನ ವ್ಯವಸ್ಥೆಯಿಲ್ಲ. ರಸ್ತೆ ಬದಿ ವಿದ್ಯುತ್ ಕಂಬಗಳು ಮಾತ್ರ ಕಂಡುಬರುತ್ತಿದ್ದು, ವಿದ್ಯುತ್ ದೀಪಗಳು ಮಾತ್ರ ಉರಿಯುತ್ತಿಲ್ಲ.

ಬ್ರಹ್ಮಾವರ ಸರ್ವಿಸ್ ರಸ್ತೆ ಆರಂಭವಾಗುವ ಮಹೇಶ್ ಆಸ್ಪತ್ರೆಯಿಂದ ಧರ್ಮಾವರ ವೃತ್ತ ತನಕ ವಾಹನ ಸಂಚಾರಿ ಮತ್ತು ಪಾದಚಾರಿಗಳಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಂತಾಗಿದೆ. ವಾಹನ ಸಂಚಾರಕ್ಕೆ ಹೊಸ ತಾಲೂಕು ಕಛೇರಿ ಬಳಿ ಮಾಡಲಾದ ಕ್ಯಾಟಲ್ ಪಾಸ್‍ನ ದಕ್ಷಿಣ ಭಾಗದಲ್ಲಿ ಕತ್ತಲಾಗುತ್ತಿದ್ದಂತೆ ಕಾಡಿನ ಅನುಭವ ಕಂಡು ಬರುತ್ತಿದೆ.

ಕೆಲವೊಂದು ದೀಪಗಳು ಮಾತ್ರ ಉರಿಯುತ್ತಿದ್ದು, ಲಘು ಮತ್ತು ಘನ ವಾಹನಗಳ ಪ್ರಖರ ಬೆಳಕು ವಾಹನ ಸಂಚಾರಿಗಳ ಕಣ್ಣಿಗೆ ಬಿದ್ದು ಮುಂದೆ ಸಂಚರಿಸಲು ಅಸಾಧ್ಯವಾದಂತಹ ಪರಿಸ್ಥಿತಿ ಇದೆ.

ಬಸ್ ನಿಲ್ದಾಣದ ಬಳಿ ಕೂಡಾ ದೂರದ ಬೆಂಗಳೂರು, ಮುಂಬೈ, ಹುಬ್ಬಳ್ಳಿ, ಬೆಳಗಾಂ ಭಾಗಕ್ಕೆ ಹೋಗುವ ಪ್ರಯಾಣಿಕರು ಬೆಳಕಿಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಗ್ರಾಮೀಣ ಭಾಗದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಡಾ ಪ್ರತೀ ಕಂಬಗಳಲ್ಲಿ ಬೆಳಕು ಕಾಣುವ ಇಂದಿನ ದಿನದಲ್ಲಿ, ಪ್ರತಿ ನಿಮಿಷಕ್ಕೆ ನೂರಾರು ವಾಹನ ಸಂಚಾರ ಮಾಡುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಪ್ರತೀ ಕ್ಷಣ ಸಂಚಾರಕ್ಕೆ ಟೋಲ್ ಪಡೆಯುವ ಹೆದ್ದಾರಿ ಇಲಾಖೆಯ ಅವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಯವರು ಕೂಡಲೇ ಎಚ್ಚೆತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ.

Related Posts

Leave a Reply

Your email address will not be published.