ಮಂಗಳೂರು: ‘ಸುರತ್ಕಲ್ ವೃತ್ತ, ಗಣೇಶಪುರ ರಸ್ತೆಗೆ ಕ್ಯಾ | ಪ್ರಾಂಜಲ್ ನಾಮಕರಣಕ್ಕೆ ಸತ್ಯಜಿತ್ ಸುರತ್ಕಲ್ ಆಗ್ರಹ
ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾ | ಪ್ರಾಂಜಲ್ ಹೆಸರು ಚಿರಸ್ಥಾಯಿಯಾಗಲು ಸುರತ್ಕಲ್ ವೃತ್ತ ಹಾಗೂ ಗಣೇಶಪುರ – ಸುರತ್ಕಲ್ ರಸ್ತೆಗೆ ಅವರ ಹೆಸರಿಡಬೇಕು ಮತ್ತು ಅವರ ಪುತ್ತಳಿ ಸ್ಥಾಪಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಆಗ್ರಹಿಸಿದರು.
ಕಾಶ್ಮೀರದ ರಜರಿಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ ಕಾರ್ಯ ಚರಣೆಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಸುರತ್ಕಲ್ ಜಂಕ್ಷನ್‍ನಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ನಮ್ಮ ಪರಿಸರದಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸಗೈದು ಸೈನ್ಯ ಸೇರಿ ಇತರರಿಗೆ ಪ್ರೇರಣೆ ನೀಡುತ್ತಾ ಇದೀಗ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರು ಸ್ಥಳೀಯ ವೃತ್ತ, ರಸ್ತೆಗೆ ಇಡುವುದು ಸೂಕ್ತವಾಗಿದೆ. ಹೋರಾಟದಲ್ಲಿ ವೀರಮರಣವನ್ನಪ್ಪಿದ ಯೋಧರಲ್ಲಿ ಅದರಲ್ಲೂ ಈ ಭಾಗದಲ್ಲಿ ಮೊದಲಿಗರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಂದ ಪ್ರೇರಣೆ ಪಡೆಯಲು ಹಾಗೂ ದೇಶಕ್ಕಾಗಿ ಬಲಿದಾನಗೈದ ಅವರು ಇಲ್ಲಿನ ನಾಗರಿಕರಿಕರ ನೆನಪಿನಲ್ಲಿ ಉಳಿಯುವಂತೆ ಆಗಬೇಕು ಎಂದರು.
ಮಾಜಿ ಯೋಧರಾದ ವಿ.ಕೆ. ಸಿಂಗ್, ಶ್ರೀಕಾಂತ್ ಶೆಟ್ಟಿ ಬಾಳ ಮತ್ತಿತರರು ಹುತಾತ್ಮ ಯೋಧರ ಕುರಿತಾಗಿ ಸ್ಮರಿಸಿ ನುಡಿ ನಮನ ಸಲ್ಲಿಸಿದರು. ಬಳಿಕ ಸರ್ವರಿಗೂ ಪುಷ್ಪಾರ್ಚನೆಗೈಯ್ಯಲು ಅವಕಾಶ ನೀಡಲಾಯಿತು. ವೃತ್ತಕ್ಕೆ ಹೆಸರಿಡುವ ಕುರಿತಂತೆ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಅರ್ಪಿಸಲು ತೀರ್ಮಾನಿಸಲಾಯಿತು. ನಿವೃತ್ತ ಸೈನಿಕರು, ರಾಷ್ಟ್ರಭಕ್ತ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಗುರುಚಂದ್ರ ಹೆಗ್ಡೆ ಗಂಗಾರಿ ನಿರೂಪಿಸಿದರು.