ಚಾರ್ಮಾಡಿ ಘಾಟಿ : ಜಲಪಾತ ವೀಕ್ಷಿಸುತ್ತಿರುವ ಮಂದಿ, ವಾಹನ ಸಂಚಾರಕ್ಕೆ ತೊಡಕು

ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಹಗಲಲ್ಲೂ ದಟ್ಟ ಮಂಜಿನ ವಾತಾವರಣ ಕಂಡುಬರುತ್ತಿದ್ದು, ವಾಹನ ಸವಾರರು ಪರದಾಟ ನಡೆಸುತ್ತಾ ಚಾಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದಿದ್ದು, ಪ್ರಸ್ತುತ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.

ಈ ಸಮಯ ಘಾಟಿಯಲ್ಲಿ ದಟ್ಟವಾದ ಮಂಜಿನ ವಾತಾವರಣ ಏರ್ಪಟ್ಟು ವಾಹನಗಳ ಹೆಡ್ಲೈಟ್ ಹಾಕಿದರೂ ದಾರಿ ಕಾಣದ ಸ್ಥಿತಿ ಉಂಟಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಇನ್ನಷ್ಟು ದಟ್ಟ ಮಂಜಿನಿಂದ ದಾರಿ ಕಾಣದ ಸ್ಥಿತಿ ಉಂಟಾಗಿ ರಸ್ತೆ ಬದಿ ಅಳವಡಿಸಿರುವ ರೆಫ್ಲೆಕ್ಟರ್‍ಗಳನ್ನು ಗಮನಿಸಿ ವಾಹನ ಓಡಿಸಬೇಕಾಗಿದೆ.

ಘಾಟಿ ರಸ್ತೆಯ ಅಲ್ಲಲ್ಲಿ ವಾಹನ ಪಾಕಿರ್ಂಗ್, ತಡೆಗೋಡೆ ಕೆಲಸ, ರಸ್ತೆ ಬದಿ ತಲೆ ಎತ್ತಿರುವ ಅಂಗಡಿ, ಸೌಂದರ್ಯ ವೀಕ್ಷಣೆ ಅಲ್ಲಲ್ಲಿ ಹುಟ್ಟಿಕೊಳ್ಳುವ ಮಳೆಗಾಲದ ಜಲಪಾತಗಳನ್ನು ವೀಕ್ಷಿಸುವ ನೆಪದಲ್ಲಿ ಏಕಾಏಕಿ ರಸ್ತೆ ದಾಟುವ ಜನರನ್ನು ಗಮನಿಸುತ್ತಾ ವಾಹನ ಓಡಿಸುವುದು ಸವಾಲಾಗಿದೆ.

ಶಿರಾಡಿ ಘಾಟಿಯಷ್ಟು ವಿಶಾಲವಾದ ರಸ್ತೆಯಲ್ಲವಾದರೂ ಚಾರ್ಮಾಡಿ ಘಾಟಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆ. ಆದರೂ ಕೆಲವು ಕಡೆಗಳಲ್ಲಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ವಾಹನ ರಸ್ತೆ ಬದಿಗೆ ಇಳಿಸಿದರೆ ಹೂತು ಹೋಗುವ ಸಾಧ್ಯತೆ ಇದ್ದೇ ಇದೆ. ಅದರೊಂದಿಗೆ ಇದೀಗ ಕಳೆದ ಎರಡು ದಿನಗಳಿಂದ ಇಲ್ಲಿನ ಮಂಜು ಕವಿದ ವಾತಾವರಣ ವಾಹನ ಸವಾರರಿಗೆ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ.
