ಚೀನಾದ ಗನ್ಸು ಹೈಡಾಂಗ್ ಬಳಿ ಭೂಕಂಪ
ಚೀನಾದ ಗನ್ಸು ಪ್ರಾಂತ್ಯ ಮತ್ತು ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರಗಳ ನಡುವೆ ನೆಲನಡುಕ ಸಂಭವಿಸಿ 120ರಷ್ಟು ಜನರು ಜೀವ ತೆತ್ತುದಲ್ಲದೆ 400ಕ್ಕೂ ಹೆಚ್ಚು ಜನರು ಗಾಯಗೊಂಡರು.
ಗನ್ಸು ಪ್ರಾಂತ್ಯದಲ್ಲಿ 105 ಜನರು ಪ್ರಾಣಕ್ಕೆ ಎರವಾದರೆ, ನೆರೆಯ ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರದಲ್ಲಿ 11 ಜನರು ಸಾವಿಗೀಡಾಗಿದ್ದಾರೆ. ಅಧಿಕೃತವಾಗಿ 116 ಜನರು ಸತ್ತುದಾಗಿಯೂ, 400ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವೆರಡೂ ಗುಡ್ಡಗಾಡು ಪ್ರಾಂತ್ಯವಾಗಿದ್ದು, ಮಂಗಳವಾರ ಆರಂಭವಾಗುವ ಮಧ್ಯರಾತ್ರಿಯ ಬಳಿಕ ಈ ಭೂಕಂಪ ಒಮ್ಮೆಗೇ ನಡುಗಿಸಿದೆ. ಲಿಯುಗೌ ನಗರದ 8 ಕಿಲೋಮೀಟರ್ ದೂರದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಕೇಂದ್ರ ಇದ್ದುದಾಗಿ ಹೇಳಲಾಗಿದೆ.
6,381 ಮನೆಗಳಿಗೆ ಹಾನಿಯಾಗಿದ್ದು ಜೆಟ್ ವೇಗದಲ್ಲಿ ಪರಿಹಾರ ಕಾರ್ಯ ನಡೆಯಬೇಕು ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಆದೇಶಿಸಿದ್ದಾರೆ.