ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಪ್ರದರ್ಶನ

 ದಿನದ ಕೆಲಸದ ಅವಧಿ 3 ಗಂಟೆ ಹೆಚ್ಚಳದ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ಆಗ್ರಹಿಸಿ ಹಾಗೂ ಕಾರ್ಮಿಕರ ಶೋಷಣೆಗೆ ಹಾಗೂ ಬಂಡವಾಳಗಾರರ ಲಾಭ ಹೆಚ್ಚಳಕ್ಕೆ ಅವಕಾಶ ನೀಡಿದ ರಾಜ್ಯದ BJP ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಇಂದು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆಯ ಕರೆಯ ಮೇರೆಗೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ CITU ಹಾಗೂ INTUC ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಹೆಜ್ಜೆ ಹೆಜ್ಜೆಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುವ BJP ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.

ಬಳಿಕ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಜನಸಾಮಾನ್ಯರ ಬದುಕಿನ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ರಾಜ್ಯದ BJP ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳ ಮಾಡುವ ಮೂಲಕ ತಾನು ಬಂಡವಾಳಿಗರ, ಮಾಲಕರ ಪರವೆಂದು ಸಾಬೀತುಪಡಿಸಿದೆ.ಇತ್ತೀಚೆಗೆ ಮಂಡಿಸಿದ ಬಜೆಟ್ ಕೂಡಾ ದುಡಿಯುವ ವರ್ಗದ ವಿರುದ್ದವಾಗಿದ್ದು ಯಾವುದೇ ಆಶಾಭಾವನೆ ಇಲ್ಲವಾಗಿದೆ. ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ – 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿರುವುದು ಕಾರ್ಮಿಕ ವಿರೋಧಿಯಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ಓಲೈಸುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ರವರು ಸ್ವತಃ ಕೈಗಾರಿಕೋದ್ಯಮಿಯಾಗಿದ್ದು, ಸಾವಿರಾರು ಕಾರ್ಮಿಕರನ್ನು ಯಾವುದೇ ಸವಲತ್ತುಗಳನ್ನು ನೀಡದೆ ಸತಾಯಿಸುತ್ತಿರುವ ಕಾರ್ಮಿಕ ವಿರೋಧಿ ವ್ಯಕ್ತಿಯಿಂದ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಹೇಗೆ ಸಾದ್ಯ ಎಂದು ಪ್ರಶ್ನಿಸಿರುವ ಅವರು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮಾಲಕ ವರ್ಗದಿಂದ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೋಚಿ ಮತ್ತೆ ಅಧಿಕಾರಕ್ಕೇರಲು BJP ಹೂಡಿರುವ ಕುತಂತ್ರವಾಗಿದೆ. ಇಂತಹ ಕಾರ್ಮಿಕ ವಿರೋಧಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರದಂತೆ ರಾಜ್ಯದ ಕಾರ್ಮಿಕ ವರ್ಗ ಒಂದಾಗಿ ತಡೆಯಬೇಕಾಗಿದೆ ಎಂದು ಹೇಳಿದರು

INTUC ಜಿಲ್ಲಾಧ್ಯಕ್ಷರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಮಾತನಾಡುತ್ತಾ 

ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗದ ಕಡಿತ, ಕಡಿಮೆ ವೇತನಕ್ಕೆ ದುಡಿಮೆ,ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದು ಹೆಚ್ಚಾಗಿದೆ.ಈ ತಿದ್ದುಪಡಿಗಳು ಕಾರ್ಮಿಕರ ಮೇಲೆ ವಿರಾಮವಿಲ್ಲದೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆಗಳ ಮಾಲಿಕರಿಗೆ 6 ದಿನಗಳಲ್ಲಿ ಉತ್ಪಾದನೆ ಆಗುತ್ತಿದದ್ದು 4 ದಿನಗಳಲ್ಲೇ ಉತ್ಪಾದನೆ ಕಾರ್ಮಿಕರ ಶ್ರಮದ ಶೋಷಣೆಯಿಂದ ಸಿಗಲಿದೆ. ಮೂರು ಶಿಫ್ಟ್ ಗಳಿಗೆ ಒದಗಿಸಬೇಕಾದ ಸಾರಿಗೆ ಸೌಲಭ್ಯ ಹಾಗೂ ಕ್ಯಾಂಟೀನ್ ಮತ್ತು ಇನ್ನಿತರ ಸೌಲಭ್ಯಗಳನ್ನು ಉಳಿಸಲು ಇದು ಅವಕಾಶ ಕಲ್ಪಿಸುತ್ತದೆ. ಚಾರಿತ್ರಿಕ 8 ಗಂಟೆ ಕೆಲಸ 8 ಗಂಟೆ ವಿರಾಮ ಮತ್ತು 8 ಗಂಟೆ ಮನೋರಂಜನೆ ಎಂಬ ಜೀವಪರ ತಾತ್ವಿಕ ನೆಲೆಯನ್ನು ಕಳಚಿ ಹಾಕಿ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವಉದಾರವಾದಿ ಆಥಿ೯ಕ ನೀತಿಯ ಜಾರಿಯ ನಿಟ್ಟಿನಲ್ಲಿ ಬಿಜೆಪಿ ಸಕಾ೯ರವು ಈ ತಿದ್ದುಪಡಿಗೆ ಕ್ರಮ ವಹಿಸಿದೆ ಎಂದು ಹೇಳಿದರು

CITU ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ,ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ, ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಕಿರುಕುಳ ಹೆಚ್ಚಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೆಲಸದ ಅಭದ್ರತೆಯಿಂದಾಗಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಕೊಳ್ಳಲು ಕಾರ್ಖಾನೆ ಮಾಲಿಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ನೊಣಯ್ಯ ಗೌಡ, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಜಯಂತ್ ನಾಯಕ್, ವಸಂತಿ ಕುಪ್ಪೆಪದವು, ಭವಾನಿ ವಾಮಂಜೂರು, ಜನಾರ್ಧನ ಕುತ್ತಾರ್, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಭಾರತಿ ಬೋಳಾರ, ಜಯಲಕ್ಷ್ಮಿ, INTUC ನಾಯಕರಾದ ರಾಜೇಶ್, ಯಮುನಪ್ಪ, ಹನುಮಂತ, ಲಿಂಗದೊರೈ, ರೈತ ಸಂಘದ ನಾಯಕರಾದ ಕೃಷ್ಣಪ್ಪ ಸಾಲಿಯಾನ್, ಸದಾಶಿವ ದಾಸ್, ವಾಸುದೇವ್ ಉಚ್ಚಿಲ, ಯುವಜನ ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಾಗೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.