ಬೀಡಿ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನಾ ಪ್ರದರ್ಶನ
ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಇಂದು (27-03-2023) ಬಿಸಿ ರೋಡ್ ನಲ್ಲಿರುವ ಬಂಟ್ವಾಳ ತಾಲೂಕು ಕಚೇರಿಯೆದುರು ಬೀಡಿ ಕಾರ್ಮಿಕರು CITU ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶಭರಿತ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಬೀಡಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು, *ದೇಶಾದ್ಯಂತ ಸುಮಾರು 65 ಲಕ್ಷ ಕಾರ್ಮಿಕರು ಬೀಡಿ ಉದ್ಯಮವನ್ನು ನಂಬಿ ಬದುಕುತ್ತಿದ್ದು, ಪರೋಕ್ಷವಾಗಿ 3 ಕೋಟಿಯಷ್ಟು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಬೀಡಿ ಉದ್ಯಮ ತೀರಾ ಸಂಕಷ್ಟದಲ್ಲಿದ್ದು, ಕಾರ್ಮಿಕರ ಬದುಕು ಡೋಲಾಯಮಾನವಾಗಿದೆ. ಕನಿಷ್ಟ ಕೂಲಿ, ತುಟಿ ಭತ್ತೆ ಹೆಚ್ಚಳ, ಪರ್ಯಾಯ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರಗಳ ಮುಂದಿಟ್ಟರೂ ಸರಕಾರಗಳು ದಿವ್ಯ ಮೌನ ವಹಿಸಿದೆ* ಎಂದು ದೂರಿದರು.
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಬಾಯಿ ಬಿಟ್ಟರೆ ಅಭಿವೃದ್ಧಿಯ ಮಂತ್ರ ಜಪಿಸುವ ಡಬ್ಬಲ್ ಇಂಜಿನ್ ಸರಕಾರಗಳು ಬೀಡಿ ಕಾರ್ಮಿಕರ ಏಳಿಗೆಗಾಗಿ ಕಿಂಚಿತ್ತೂ ಗಮನ ನೀಡಿಲ್ಲ, ಮಾತ್ರವಲ್ಲದೆ ವಿಧಾನಸಭೆ ಸಂಸತ್ತಿನಲ್ಲಿ ಶಾಸಕ ಸಂಸದರು ಒಂದು ಶಬ್ದನೂ ಮಾತನಾಡಿಲ್ಲ* ಎಂದು ಹೇಳಿದರು.
_ಬಂಟ್ವಾಳ ತಾಲೂಕು CITU ನಾಯಕರಾದ ಉದಯ ಕುಮಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರೆ, CITU ಜಿಲ್ಲಾ ನಾಯಕರಾದ ಜಯಂತಿ ಬಿ ಶೆಟ್ಟಿಯವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಅರ್ಪಿಸಲಾಯಿತು.
_ಹೋರಾಟದ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ಜಯಲಕ್ಷ್ಮಿ, ಬೀಡಿ ಕಾರ್ಮಿಕರ ಮುಖಂಡರಾದ ಲೋಲಾಕ್ಷಿ ಬಂಟ್ವಾಳ, ಗಿರಿಜಾ, ವಿಮಲ, ಸರಸ್ವತಿ, CITU ನಾಯಕರಾದ ಚಂದ್ರ ಪೂಜಾರಿ, ಜನಾರ್ಧನ ಕುಲಾಲ್ ಮುಂತಾದವರು ವಹಿಸಿದ್ದರು.