ಕಾಂಗ್ರೆಸ್‍ನಿಂದ ಬಟ್ಟಲು ಬಡಿದು ಪ್ರತಿಭಟನೆ

ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಮಿನಿವಿಧಾನಸೌಧ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಟ್ಟಲು ಬಡಿದು ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 7ಕೆಜಿ ಅಕ್ಕಿ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ 7 ಕೆಜಿ ಅಕ್ಕಿಯನ್ನು ಕೊಡುವಲ್ಲಿ ವಿಫಲವಾಗಿತ್ತು. ಇದೀಗ ರಾಜ್ಯ ಸರಕಾರ ಬಡವರಿಗೆ ಹತ್ತು ಕೆಜಿ ಅಕ್ಕಿ ಕೊಡಲು ನಿರ್ಧರಿಸಿದ್ದು ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸುವ ಮೂಲಕ ಬಡವರ ಅನ್ನಭಾಗ್ಯ ಯೋಜನೆಗೆ ಕಲ್ಲು ಹಾಕಿರುವುದು ಖಂಡನೀಯ ಎಂದರು.

ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಸಹಿತ ಬಡವರ ಪರವಾಗಿನ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ್ದರೆ ಅದನ್ನು ಬಿಟ್ಟಿ ಭಾಗ್ಯಗಳೆಂದು ದೂಷಿಸುವ ಮೂಲಕ ಬಿಜೆಪಿ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅನ್ನಭಾಗ್ಯಕ್ಕೆ ಅಕ್ಕಿ ನೀಡದಿರುವ ಹಿಂದೆ ಕೇಂದ್ರ ಸರಕಾರ ದೊಡ್ಡ ಷಢ್ಯಂತ್ರ ನಡೆಸುತ್ತಿದ್ದು ರಾಜ್ಯದ ಕಾಂಗ್ರೇಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಬಡವರೇ ತಕ್ಕ ಪಾಠ ಕಲಿಸುತ್ತಾರೆ ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಜೆ.ಆರ್. ಲೋಬೋ, ಸುರೇಶ್ ಬಳ್ಳಾಲ್, ಎಸಿ ವಿನಯರಾಜ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ಬೇಬಿ ಕುಂದರ್, ಸುರೇಶ್ ಜೋರಾ ಮೊದಲಾದವರು ಉಪಸ್ಥಿತರಿದ್ದರು.
