ಮೂಡುಬಿದಿರೆ|| ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ: ಸಾಧಕರಿಗೆ ಗೌರವ ಪುರಸ್ಕಾರ ಪ್ರದಾನ

ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಮೂಡುಬಿದಿರೆ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಾಲ್ಕನೇ ದಿನದಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆಯ ಖ್ಯಾತ ತಜ್ಞ ವೈದ್ಯ ಡಾ.ಹರೀಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯಕ್ಷಗಾನ-ಸ್ವರೂಪ ಮತ್ತು ನಾವೀನ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜೋಶಿ ಅವರು, ಜಗತ್ತಿನ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವೂ ಒಂದು. ಇಂದಿನ ದಿನಗಳಲ್ಲಿ ಯಕ್ಷಗಾನದಲ್ಲೂ ಆಧುನಿಕತೆ ಹಾಸು ಹೊಕ್ಕಿದೆ. ಯಕ್ಷಗಾನ ಕಲೆಯು ಅಭಿವೃದ್ಧಿಯಾಗಬೇಕು ಆದರೆ ಅದು ಜನಾಕರ್ಷಣೆಯಾಗಬೇಕೆಂದು ಕಲೆಯನ್ನು ಬಲಿಕೊಡಬಾರದು.

ಕೆಟ್ಟ ಸಂಗತಿಗಳು ವೈರಸ್ ನಂತೆ ಒಳ ಹೊಕ್ಕರೆ ಅದು ಹೊರಗೆ ಬರಲು ಕಷ್ಟಸಾಧ್ಯ ಇದನ್ನು ಯಕ್ಷಗಾನ ಮೇಳದ ಯಜಮಾನರುಗಳು, ಕಲಾವಿದರು ಮತ್ತು ಪ್ರೇಕ್ಷಕರು ಅರಿತುಕೊಳ್ಳಬೇಕಾಗಿದೆ ಎಂದರು.

ಮೂಡುಬಿದಿರೆಯ ವಿವಿಧ ರಂಗಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವ ರಾಮಕೃಷ್ಣ ಶಿರೂರು, ಸಿಸ್ಟರ್ ಪ್ರೆಸಿಲ್ಲಾ, ಸಂಧ್ಯಾ, ಎಸ್. ಸುರೇಂದ್ರ ಪೈ ಪುತ್ತಿಗೆ, ಕು. ಪ್ರೇಮಶ್ರೀ ಕಲ್ಲಬೆಟ್ಟು, ಧೀರಜ್ ಕುಮಾರ್ ಕೊಳ್ಕೆ ಇವರಿಗೆ ಸಮಾಜ ಮಂದಿರ ಗೌರವ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಸಂಚಾಲಕ ಡಾ.ಪುಂಡಿಕೈ ಗಣಪಯ್ಯ ಭಟ್, ಸಮಾಜ ಮಂದಿರ ಸಭಾದ ಟ್ರಸ್ಟಿಗಳು ಉಪಸ್ಥಿತರಿದ್ದರು. ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಮಂದಿರ ಸಭಾದ ಜತೆ ಕಾರ್ಯದರ್ಶಿ ಎಂ.ಗಣೇಶ್ ಕಾಮತ್ ಪುರಸ್ಕೃತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಎಂ.ರೂಪೇಶ್ ಕುಮಾರ್ ನಿರ್ದೇಶನದಲ್ಲಿ ಟಾಪ್ ಎಂಟರ್ ಟೈನರ್ಸ್ ಡ್ಯಾನ್ಸ್ ಅಕಾಡೆಮಿ ಮೂಡುಬಿದಿರೆ ಇವರಿಂದ ‘ನೃತ್ಯ ವೈವಿಧ್ಯ’ ಪ್ರಸ್ತುತಗೊಂಡಿತು.

Related Posts

Leave a Reply

Your email address will not be published.