ಬಿಜೆಪಿಗೆ ಎದುರಾಳಿಗಳು ಯಾರೆಂಬುವುದು ಲೆಕ್ಕವಲ್ಲ : ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪವಾರ್ ಹೇಳಿಕೆ
ಪುತ್ತೂರು; ದೇಶದಲ್ಲಿರುವ ಲೋಕತಂತ್ರ ವ್ಯವಸ್ಥೆಯಲ್ಲಿ ಯಾರು ಯಾವ ಪಕ್ಷವನ್ನೂ ಸೇರಬಹುದು. ಆದರೆ ಬಿಜೆಪಿಗೆ ಎದುರಾಳಿಗಳು ಯಾರೆಂಬುವುದು ಲೆಕ್ಕವಲ್ಲ. ಜನರ ವಿಶ್ವಾಸವೇ ನಮ್ಮ ಶಕ್ತಿಯಾಗಿದೆ. ಪಕ್ಷ ಸಿದ್ಧಾಂತಕ್ಕೆ ಬದ್ಧರಾದವರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪವಾರ್ ಹೇಳಿದರು.
ಅವರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಜನಾರೋಗ್ಯ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವುದು ಪ್ರಧಾನಿಯವರ ಕನಸಾಗಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಬೇಡಿಕೆ ಬರಬೇಕು. ಹಾಗಾದಾಗ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನಡೆಯಲಿದೆ ಎಂದು ಅವರು ಹೇಳಿದರು.
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ಗೌಡ ಅನುಭವಿ. ತಳಮಟ್ಟದ ನಾಡಿಮಿಡಿತ ಅರಿತವರು. ಮಹಿಳೆಯರ ಧ್ವನಿಯಾಗಿ ಕಾರ್ಯನಿರ್ವಹಿಸುವ ನಂಬಿಕೆ ಪಕ್ಷಕ್ಕಿದೆ. ಅವರಿಗೆ ಜನತೆ ಆಶೀರ್ವಾದ ಮಾಡಬೇಕಾಗಿದೆ. ಡಬಲ್ ಇಂಜಿನ್ ಇರುವ ರಾಜ್ಯಗಳಲ್ಲಿ ಸರ್ಕಾರದ ಯೋಜನೆಗಳು ಹೆಚ್ಚು ವೇಗ ಪಡೆದುಕೊಂಡಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಚಿಂತನೆಯೊಂದಿಗೆ ಅಂತ್ಯೋದಯ ಕಲ್ಪನೆಯಲ್ಲಿ ಡಬಲ್ ಇಂಜಿನ್ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದೆ. ಕರ್ನಾಟಕದಲ್ಲಿಯೂ ಸರ್ಕಾರ ಹೊಸ ಯೋಜನೆಗಳೊಂದಿಗೆ ಕೆಲಸ ನಿರ್ವಹಿಸಿದೆ. ದಕ್ಷಿಣಕನ್ನಡದ ಅಭಿವೃದ್ಧಿಗಾಗಿ ಇಲ್ಲಿನ ಜನತೆ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾನಿ, ಗ್ರಾಮಾಂತರ ಮಂಡಳದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಳ ಅಧ್ಯಕ್ಷ ಪಿ.ಜಿ.ಜಗನ್ನೀವಾಸ ರಾವ್, ಚಂದ್ರಶೇಖರ ರಾವ್ ಬಪ್ಪಳಿಗೆ, ಮಂಜುಳಾ ರಾವ್ ಮತ್ತು ಆರ್.ಸಿ.ನಾರಾಯಣ ಉಪಸ್ಥಿತರಿದ್ದರು.