ನೈತಿಕ ಮೌಲ್ಯವನ್ನು ಉಳಿಸುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು- ಶಿವಾನಂದ ತಗಡೂರು
ಮಂಗಳೂರು: ಆಧುನಿಕ ಯುಗದಲ್ಲಿ ತನ್ನ ವೃತ್ತಿ ಬದ್ಧತೆ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಮಂಗಳೂರಿನ
ಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ವೃತ್ತಿ ಬದ್ಧತೆ ಇರುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಎಂದ ಅವರು ಇಂದು ನಕಲಿ ಪತ್ರಕರ್ತರ ಮತ್ತು ಬ್ಲಾಕ್ ಮೇಲ್ ಪತ್ರಕರ್ತರ ಹಾವಳಿಯನ್ನು ತಪ್ಪಿಸುವ ಕೆಲಸ ಪತ್ರಕರ್ತರ ಸಂಘಗಳು ಮಾಡಬೇಕಾಗಿದೆ ಎಂದರು.
ಪತ್ರಕರ್ತರ ಮೇಲೆ ಸಮಾಜ ದೊಡ್ಡ ಭರವಸೆ ಇರಿಸಿದೆ. ಆ ಭತವಸೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದ ಅವರು ಹೇಳಿದರು.
ಪತ್ರಕರ್ತರ ಬೆಳವಣಿಗೆಗೆ ಮುದ್ರಣ ಮಾಧ್ಯಮ ಅತ್ಯಂತ ಸೂಕ್ತ ವೇದಿಕೆ. ಮುದ್ರಣ ಮಾಧ್ಯಮದ ಸುದ್ದಿಮನೆಯ ಗರಡಿಯಲ್ಲಿ ಬೆಳೆದ ಪತ್ರಕರ್ತರು ಬಳಿಕ ಯಾವುದೇ ಮಾಧ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು ಎಂದರು. ಭಾಷೆಯ ಬಳಕೆ, ಸುದ್ದಿ ಪ್ರಸ್ತುತಪಡಿಸುವ ರೀತಿ ಅತೀ ಅಗತ್ಯ ಎಂದರು.