ಬಲತ್ಕಾರದ ಮತಾಂತರಕ್ಕೆ ನನ್ನ ವಿರೋಧವಿದೆ : ಡಾ. ಪ್ರಭಾಕರ ಭಟ್ ಕಲ್ಲಡ್ಕ

ಬಂಟ್ವಾಳ: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಕೈ ಬಿಡುವ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಆರ್‍ಎಸ್‍ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಗಳು ಬದಲಾದಾಗ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ, ಒಳ್ಳೆಯದನ್ನು ಮುಂದುವರೆಸುವ ಕೆಲಸ ಆಗಬೇಕು. ಆದರೆ ಈಗ ಬಂದಿರುವ ಸರ್ಕಾರ ಹಿಂದಿನವರು ಮಾಡಿದ್ದೆಲ್ಲವನ್ನು ತಪ್ಪು ಎನ್ನುವ ರೀತಿಯಲ್ಲಿ ಇನ್ಯಾವುದೋ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದು ಮತಾಂತರ ನಿಷೇಧ ಕಾನೂನನ್ನು ವಾಪಸ್ಸು ಪಡೆಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.

ಮೋಸ, ವಂಚನೆಯ ಮೂಲಕ ಬಲತ್ಕಾರದ ಮತಾಂತರ ಮಾಡಬಾರದು, ಸ್ವ ಇಚ್ಛೆಯಿಂದ ಮತಾಂತರ ಆಗುವ ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದ್ದು ನಿಯಮಾನುಸಾರ ಕಾನೂನು ಬದ್ದವಾಗಿ ಮತಾಂತರ ಆಗುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಅಂತಹ ಕಾನೂನನ್ನು ಕಳೆದ ಸರ್ಕಾರ ಜಾರಿಗೆ ತಂದಿತ್ತು. ಆದರೆ ಆಮಿಷ ತೋರಿಸಿ, ಯಾವುದೋ ಮತದವರ ಸಂಖ್ಯೆ ಹೆಚ್ಚಿಸುವುದು ಮತ್ತು ವಿದೇಶಿ ಚಿಂತನೆಯಿಂದ ಬಲತ್ಕಾರದ ಮತಾಂತರ ಸರಿಯಲ್ಲ, ಅದನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೆ ಬಂದಿರುವ ಕಾನೂನನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಪ್ರಭಾಕರ ಭಟ್ ಹೇಳಿದರು.

Related Posts

Leave a Reply

Your email address will not be published.