ಬೈಂದೂರು : ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಆಲಿಸಿದ ಶಾಸಕ ಗುರುರಾಜ್
ಬೈಂದೂರು ವಿಧಾನಸಭಾ ಕ್ಷೇತ್ರದ ತಲ್ಲೂರಿನಿಂದ ಬೈಂದೂರಿನ ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆಗಾಲದ ಸಂದರ್ಭ ಸಮಸ್ಯೆ ಉದ್ಭವವಾಗುವ ಪ್ರದೇಶಗಳಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಮರವಂತೆ, ನಾಗೂರು, ಉಪ್ಪುಂದ, ಬೈಂದೂರು ಭಾಗಗಳಲ್ಲಿ, ಜನಸಾಮಾನ್ಯರ ಸಮಸ್ಯೆ ಬಗ್ಗೆ ವಿಚಾರಿಸಿ, ಸ್ಥಳೀಯರ ಒಂದಿಷ್ಟು ಮನವಿಗಳನ್ನು ಸ್ವೀಕರಿಸಿ, ಶೀಘ್ರದಲ್ಲೇ ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆಯವರ ಕೆಲಸಗಳು ಬಾಕಿಯಿದೆ. ಹೊಂದಾಣಿಕೆ ಮೂಲಕ ಈ ಕೆಲಸಗಳು ಆಗಬೇಕಿದೆ. ಹೆದ್ದಾರಿಯು ಕೆಲವೆಡೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಯಾವುದೇ ಸೂಚನಾ ಫಲಕ ಇಲ್ಲದೆ, ನಮ್ಮ ಕಣ್ಮುಂದೆ ಸಾಕಷ್ಟು ಅಪಘಾತಗಳು ಸಂಭವಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ, ಐ.ಆರ್.ಬಿ ಗುತ್ತಿಗೆದಾರರ, ಸ್ಥಳೀಯಾಡಳಿತದವರಿಗೆ ಮನವಿ ನೀಡಿದ್ದೇನೆ. ಆದಷ್ಟು ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಸಮಸ್ಯೆಗಳು ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಳಿತು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ಐ.ಆರ್.ಬಿ ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು.