ಸೀತಾನದಿಯಲ್ಲಿ ಕಳೆದುಹೋಗಿದ್ದ ಚಿನ್ನದ ಸರ ಹುಡುಕಿಕೊಟ್ಟ ಈಶ್ವರ್ ಮಲ್ಪೆ

ಉಡುಪಿ ಜಿಲ್ಲೆಯ ಪರ್ಕಳದ ಪೆರ್ಣಂಕಿಲ ಸಮೀಪದಲ್ಲಿರುವ ಸೀತಾನದಿಯಲ್ಲಿ ಎರಡು ದಿನದ ಹಿಂದೆ ಈಜಲು ಹೋಗಿದ್ದ ಮಲ್ಪೆಯ ಕೊಪ್ಪಲತೋಟ ನಿವಾಸಿ ಕಿಶನ್ ಕೋಟ್ಯಾನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಮೂರು ಲಕ್ಷ ಮೌಲ್ಯದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಆ ನಂತರ ನುರಿತ ಈಜುಪಟುಗಳಿಂದ ಹುಡುಕಾಟ ನಡೆಸಿಯೂ ಆ ಚಿನ್ನದ ಸರ ಸಿಕ್ಕಿರಲಿಲ್ಲ.
ಈ ಘಟನೆ ನಡೆದು ಎರಡು ದಿನದ ಬಳಿಕ ಮುಳುಗುತಜ್ನ ಈಶ್ವರ್ ಮಲ್ಪೆಯವರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಕಾರ್ಯ ಪ್ರವ್ರತ್ತರಾದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿದರು. ಸತತ ಅರ್ಧ ಗಂಟೆಯ ಕಾರ್ಯಾಚರಣೆಯಲ್ಲಿ 30 ಅಡಿ ಆಳದಲ್ಲಿ ಬೆಲೆಬಾಳುವ ಚಿನ್ನದ ಸರವನ್ನು ಹುಡುಕಿ ಮೇಲಕ್ಕೆ ತಂದು, ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ.
