ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನುಡಿಜಾತ್ರೆ ಕಲೆ, ಸಾಹಿತ್ಯ, ಸಾಮಾಜಿಕ ನೆಲೆಗಳ ವಿಚಾರ-ವಿಮರ್ಶೆ

ಉಡುಪಿ, ಅ. ೨೭ :ಕನ್ನಡದ ಖ್ಯಾತ ಕಥೆಗಾರ,ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಕಾಪು ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನ ನ. ೧೫ರಂದು, ಶನಿವಾರ, ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಜರುಗಲಿರುವ ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಸ್ತಾಪವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯು ಸಮ್ಮತಿಸಿದೆ ಎಂದು ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಪ್ರಕಟಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಕಳಕಳಿಯ ಸಾಕ್ಷಿಪ್ರಜ್ಞೆ ಕರ್ನಾಟಕದ,ವಿಶೇಷವಾಗಿ ನಮ್ಮ ಕರಾವಳಿಯ ಸಾಮಾಜಿಕ ಕಳಕಳಿಯ ಸಾಕ್ಷಿಪ್ರಜ್ಞೆಯಾಗಿರುವ ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು ೧೯೪೯ರ ಜೂನ್ ೨೫ರಂದು ಬಾರಕೂರಿನಲ್ಲಿ ಜನಿಸಿದರು. ಕಾಪು ತಾಲೂಕಿನ ಕಟ್ಪಾಡಿಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದ ಅವರು,ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಕಟ್ಪಾಡಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡವರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಅವರು, ಪ್ರಸ್ತುತ ಕಟ್ಪಾಡಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಕರಾವಳಿಯ ಸಾಮಾಜಿಕ ಬದುಕು, ಸೌಹಾರ್ದ ಸಂಸ್ಕೃತಿಯಹಿನ್ನೆಲೆಯಲ್ಲಿ, ವಿವಿಧ ಸೃಜನಶೀಲ ಆಯಾಮಗಳಿಂದ, ವಿಶಿಷ್ಟ ನಿರೂಪಣಾ ಶೈಲಿಯೊಂದಿಗೆ ಅವರು ಹಲವಾರು ಕಥೆ, ಕಾದಂಬರಿ, ಲೇಖನ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.
ಗೋರಿ ಕಟ್ಟಿಕೊಂಡವರು, ನೋಂಬು, ದಜ್ಜಾಲ, ಅತ್ತರ್ ಹಾಜಿಕಾ ಮತ್ತು ಇತರ ಕಥೆಗಳು, ಪಚ್ಚ ಕುದುರೆ, ಕಡವು ಮನೆ, ಕುಂದಾಪ್ರ ಅವರ ಪ್ರಮುಖ ಕಥಾಸಂಕಲನಗಳು. ಸರಕುಗಳು, ಕಚ್ಚಾದ ಅವರ ಪ್ರಸಿದ್ಧ ಕಾದಂಬರಿಗಳಾಗಿವೆ. ಕೇರಳದಲ್ಲಿ ಹದಿನೈದು ದಿನಗಳು, ರಾಷ್ಟ್ರೀಯತೆ ಮತ್ತು ಮುಸ್ಲಿಮರು, ಕೈಯೂರಿನ ರೈತವೀರರು, ಸೂಫಿ ಸಂತರು, ಸೂಫಿ ಮಹಿಳೆಯರು, ಕೋಮು ಹಿಂಸೆ ನಿಯಂತ್ರಣಾ ಮಸೂದೆ, ಸೂಫಿ ಅಧ್ಯಾತ್ಮ ದರ್ಶನ ಸಹಿತ ಇನ್ನಿತರೆ ಮಹತ್ತ್ವದ ಕೃತಿಗಳನ್ನು ಅವರು ರಚಿಸಿದ್ದಾರೆ.
ಬೇರೂತಿನಿಂದ ಜರೂಸಲೇಮಿಗೆ, ಸಾದತ್ ಹಸನ್ ಮಂಟೊ ರವರ ’ದೇಶವಿಭಜನೆಯ ಕಥೆಗಳು’, ಇಸ್ಮತ್ ಚುಗ್ತಾಯಿ [ಎಂ.ಐ.ಎಲ್.- ಕೇಂದ್ರ ಸಾಹಿತ್ಯ ಅಕಾಡೆಮಿ, ೨೦೧೩] ಮತ್ತಿತರ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಟ್ಪಾಡಿಯವರ ಕೃತಿಗಳು ಹಿಂದಿ, ಗುಜರಾತಿ, ಮರಾಠಿ, ತಮಿಳು, ಬಂಗಾಳಿ, ಮಲಯಾಳ, ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡಿವೆ.
ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ೨೦೦೭ರಲ್ಲಿ ಚಿಕ್ಕಮಗಳೂರಿನಲ್ಲಿ ಜರಗಿದ ಅಖಿಲಭಾರತ ಬ್ಯಾರಿಭಾಷಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

Related Posts

Leave a Reply

Your email address will not be published.