ದಕ್ಷಿಣ ಕೊರಿಯಾ ಜಾಂಬೂರಿಯಲ್ಲಿ ಮೇಳೈಸಿದ ಯಕ್ಷಗಾನ, ಹುಲಿವೇಷ
ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ವತಿಯಿಂದ ದಕ್ಷಿಣ ಕೊರಿಯಾದ ಸಿಮನ್ ಗಾಮ್ ದ್ವೀಪದಲ್ಲಿ ನಡೆಯುತ್ತಿರುವ ವಿಶ್ವ ಜಾಂಬೂರಿಯಲ್ಲಿ ಮಂಗಳವಾರ ದ.ಕ ಜಿಲ್ಲೆಯ 25 ವಿದ್ಯಾರ್ಥಿಗಳ ತಂಡ ಕರಾವಳಿಯ ಯಕ್ಷಗಾನ ಹಾಗೂ ಹುಲಿವೇಷ ಪ್ರದರ್ಶನವನ್ನು ನೀಡುವ ಮೂಲಕ ಜನಮನ ಗೆದ್ದಿದೆ ಅಲ್ಲದೆ ಭರತನಾಟ್ಯ, ಕೇರಳದ ಮೋಹಿನಿಯಾಟ್ಯಂ, ಒರಿಸ್ಸಾದ ಒಡಿಸ್ಸಿ, ಗುಜರಾತ್‍ನ ಬಾಂಗ್ಡಾ, ರಾಜಸ್ಥಾನದ ಗಾರ್ಭಾ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ಸೊಬಗನ್ನು ಕಂಡು ವಿದೇಶೀಯರು ಸಂಭ್ರಮಿಸಿದ್ದಾರೆ.
ಡಾ. ಎಂ. ಮೋಹನ್ ಆಳ್ವಾ ಮಾರ್ಗದರ್ಶನದಲ್ಲಿ ರಂಗ ನಿರ್ದೇಶಕ ಜೀವನ್‍ರಾಮ್ ಸುಳ್ಯ ಈ ತಂಡಕ್ಕೆ ನೃತ್ಯ ನಿರ್ದೇಶನ ನೀಡಿದ್ದರು. ಅಲ್ಲದೆ ಇಂಡಿಯಾ ಕಲ್ಚರಲ್ ಡೇಯಲ್ಲಿ ಬೇರೆ ಬೇರೆ ದೇಶದ ಪ್ರತಿನಿಧಿಗಳನ್ನು ಕ್ಯಾಂಪ್‍ಗೆ ಆಹ್ವಾನಿಸಿ ದೇಶದ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಹಾಗೂ ಇಲ್ಲಿನ ವಿವಿಧ ಆಹಾರ ಪದ್ದತಿಗಳು, ದೇಸೀ ಆಟಗಳನ್ನು ಪರಿಚಯಿಸಿದರು. ಪರಸ್ಪರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಧರಿಸಿ ಸಂಭ್ರಮಿಸಿದರು.
ದ.ಕ. ಜಿಲ್ಲೆಯ ತಂಡದ ಸದಸ್ಯ ಮನುಜ ನೇಹಿಗ ಏಕಾಗ್ರತೆ ಮತ್ತು ಚಾಕಚಕ್ಯತೆಯಿಂದ ನಡೆಸುವ ಮಣಿಪುರ ಸ್ಟಿಕ್ ಡ್ಯಾನ್ಸ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಅಲ್ಲಿನ ಮಾಧ್ಯಮಗಳಲ್ಲಿ ಚಿತ್ರ ಸಹಿತ ಪ್ರಕಟಿಸಿವೆ.
ಸುಡು ಬಿಸಿಲು, ಆಕಸ್ಮಿಕವಾಗಿ ಸುರಿಯುವ ಮಳೆಯ ಜೊತೆಗೆ ತೀವ್ರವಾದ ಗಾಳಿಯ ಪ್ರತಿಕೂಲ ವಾತಾವರಣ ಅಲ್ಲಿದೆ. ಮಂಗಳವಾರ ತೂಫಾನ್ ಭೀತಿಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದ ಹಿನ್ನಲೆಯಲ್ಲಿ ಅಲ್ಲಿನ ಸ್ಕೌಟ್ಸ್ ಅಸೋಸಿಯೇಶನ್ ಹಾಗೂ ಕೊರಿಯಾ ಸರ್ಕಾರ ತುರ್ತಾಗಿ ಒಂದು ಸಾವಿರ ವಾಹನಗಳನ್ನು ಬಳಸಿ ಸುಮಾರು 40 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಮಂಗಳವಾರವೇ ಸ್ಥಳಾಂತರಿಸಿದೆ. ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮ ಮುಂದುವರಿದಿದೆ.