ತಲಪಾಡಿ ಗ್ರಾ.ಪಂ ಬಿಜೆಪಿ ಸದಸ್ಯರ ಬೆಂಬಲ, ಎಸ್‌ಡಿಪಿಐ ಸದಸ್ಯರಿಗೆ ಅಧ್ಯಕ್ಷ ಸ್ಥಾನ

ಉಳ್ಳಾಲ: ತಲಪಾಡಿ ಗ್ರಾ.ಪಂ ಎರಡನೇ ಅವಧಿಗೆ ಎಸ್‌ ಡಿಪಿಐ ಬೆಂಬಲಿತ ಅಧ್ಯಕ್ಷ ಟಿ.ಇಸ್ಮಾಯಿಲ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತರು ಎಸ್‌ ಡಿಪಿಐ ಬೆಂಬಲಿತರಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರೀಕ್ಷಿತ ಅಭ್ಯರ್ಥಿಯಾಗಿದ್ದ ಸತ್ಯರಾಜ್‌ ಪರಾಭವಗೊಂಡಿದ್ದಾರೆ.

ಗ್ರಾಮದ ಆಡಳಿತದಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, 1 ಕಾಂಗ್ರೆಸ್‌ ಹಾಗೂ 10 ಎಸ್‌ ಡಿಪಿಐ ಬೆಂಬಲಿತರು ಸದಸ್ಯರಾಗಿದ್ದರು. ಆದರೆ ಇಂದು ನಡೆದ ಚುನಾವಣೆಗೆ ಕಾಂಗ್ರೆಸ್‌ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್‌ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು. ‌ ಟಿ ಇಸ್ಮಾಯಿಲ್‌ ಮತ್ತು ಸತ್ಯರಾಜ್‌ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು, ಇಬ್ಬರು ಸಮಬಲ ಮತವನ್ನು ಆರಂಭದ ಹಂತದಲ್ಲಿ ಪಡೆದುಕೊಂಡಿದ್ದರು. ನಂತರ ಚುನಾವಣಾಧಿಕಾರಿಗಳ ಆದೇಶದಂತೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಟಿ.ಇಸ್ಮಾಯಿಲ್‌ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತರ ಸಂಖ್ಯೆ ಹೆಚ್ಚಿದ್ದರೂ , ಅಲ್ಲಿದ್ದ ಇಬ್ಬರು ಎಸ್‌ ಡಿಪಿಐ ಬೆಂಬಲಿತರಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಮಬಲ ಬಂದಿದೆ. ಬಿಜೆಪಿಯ ಸತ್ಯರಾಜ್‌ ಅವರು ಗೆಲ್ಲುವ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಪಕ್ಷದ ಬೆಂಬಲಿಗರು ಹೂಹಾರಗಳನ್ನು ತಂದಿದ್ದರೂ, ಸ್ವಂತ ಪಕ್ಷದವರೇ ಬೇರೆ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ನಿರಾಶೆಗೊಂಡರು. ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಭಾಗವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಕೇಶವ ಉಪಸ್ಥಿತರಿದ್ದರು

Related Posts

Leave a Reply

Your email address will not be published.