ಕಲಬೆರಕೆ ಮನಸು ತಿನಿಸು

ಗೋವಾದ ಮಾಪ್ಸಾ ಪುರಸಭೆಯು ಕಲಬೆರಕೆ ಎಂದು ಗೋಬಿ ಮಂಚೂರಿ ನಿಷೇಧಿಸಿದೆ. ಮರ್ಯಾದೆಗೆಟ್ಟ ಚಕ್ರವರ್ತಿ ಸೂಲಿಬೆಲೆಗೆ ಸಮಾಜದ ನಡುವೆ ವಿಷ ಬೆರೆಸುವುದೆ ಕೆಲಸ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕಡತದಿಂದ ತೆಗೆದ ನನ್ನ ಮಾತಿನ ಭಾಗವನ್ನು ಮತ್ತೆ ಸೇರಿಸಿ. ನಾನು ಅದರಲ್ಲಿ ಯಾರ ಹೆಸರನ್ನೂ ಬೆರೆಸಿರಲಿಲ್ಲ ಎಂದು ದಿಲ್ಲಿ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯ ಮಾಡಿದ್ದಾರೆ. ನಿಮ್ಮ ನಡುವೆ ಬೆರೆಯದೆ ದೂರದಲ್ಲಿ ಕೈಬೀಸಿ ಹೋದ ಪ್ರಧಾನಿಯವರ ಊಳಿಗದ ನೀವು ನಮ್ಮದು ಗುಲಾಮಗಿರಿ ಎನ್ನುತ್ತೀರಾ ಎಂದು ಶಾಸಕ ಬಾಲಕೃಷ್ಣ ಅವರು ವಿಜಯೇಂದ್ರರ ಜೊತೆಗೆ ಎಕ್ಸ್ ಪೆÇೀಸ್ಟ್ ಕದನ ನಡೆಸಿದ್ದಾರೆ.

ಸಂಬಂಧ ಇಲ್ಲದ ಸಂಗತಿಗಳಂತೆ ಕಂಡರೂ ಇವುಗಳ ಒಳ ತಿರುಳು ಬೆರಕೆ ಮತ್ತು ಕಲಬೆರಕೆ. ಈಗ ಎಲ್ಲ ಪಕ್ಷಗಳಲ್ಲೂ ಎಲ್ಲ ಪಕ್ಷಗಳವರೂ ಕಲಬೆರಕೆ ಆಗಿರುವುದರಿಂದ ಯಾರು ಯಾವ ಪಕ್ಷದಿಂದ ಬಂದವರು ಎಂದು ತಿಳಿಯಬೇಕಾದರೆ ಪಿಎಚ್.ಡಿ. ಸಂಶೋಧನೆಯನ್ನೇ ನಡೆಸಬೇಕು. ಭಾರತದ ಜನರು ಆರು ಜನಾಂಗಗಳ ಬೆರಕೆ. ಹಿಂದೂ ಧರ್ಮವು ಶಾಕ್ತ, ಶೈವ, ವೈದಿಕ ಇತ್ಯಾದಿಗಳ ಬೆರಕೆ. ತುಳುವರಿಗೆ ಕಾಯಿಪಲ್ಯಕ್ಕೆ ಒಣ ಮೀನು ಬೆರೆಸುವುದರಿಂದ ಹಿಡಿದು ಬೆರಕೆ ಉಣಿಸಿನಲ್ಲಿ ಹೆಚ್ಚು ಆಸಕ್ತಿ. ಜಾತಿ ಬೆರಕೆ, ಧರ್ಮ ಬೆರಕೆ ಇಲ್ಲೆಲ್ಲ ಹಂಸ ಕ್ಷೀರ ನ್ಯಾಯಕ್ಕೆ ಸ್ಥಳವಿಲ್ಲ.

ಆಹಾರದ ಬೆರಕೆಯಲ್ಲಿ ಎರಡು ವಿಧಾನ. ಒಂದು ಅಗ್ಗದ್ದನ್ನು ವ್ಯಾಪಾರಿ ಲಾಭದಿಂದ ಬೆರೆಸುವುದು. ಇನ್ನೊಂದು ಮಾರಾಟವೇ ಮುಖ್ಯ ಎಂದು ಬೇಡದ್ದನ್ನು ಬೆರೆಸುವುದು. ಇದೇ ಕಲಬೆರಕೆ. ಇದು ಆಹಾರದಿಂದ ಔಷಧಿಯವರೆಗೂ ನಡೆಯುತ್ತದೆ. ಮೊದಲನೆಯದರಲ್ಲಿ ವ್ಯಾಪಾರಿ ಲಾಭ ನೋಡಿದರೆ ಎರಡನೆಯದರಲ್ಲಿ ವ್ಯಾಪಾರಿ ಲಾಭಕ್ಕಾಗಿ ಬೇರೆಯವರಿಗೆ ಹಾನಿ ಮಾಡಲೂ ಹೇಸದ ವ್ಯಕ್ತಿ ಆಗಿರುತ್ತಾನೆ.

ಗೋಬಿ ಎಂದರೆ ಹೂಕೋಸು. ಮಂಚೂರಿಯನ್ ಎಂದರೆ ಚೀನಾ ಮೂಲದ್ದು. ಇದರ ಹಿಟ್ಟಿಗೆ ಬಣ್ಣ ಹಾಕುವರು. ಅಡುಗೆ ಬಣ್ಣ ಇದ್ದರೂ ಆಹಾರಕ್ಕೆ ಅಗ್ಗದ ರಾಸಾಯನಿಕ ಬಣ್ಣ ಬೆರೆಸುವುದು ಇಂದು ಎಲ್ಲ ಆಹಾರ ತಯಾರಿಕೆಯಲ್ಲೂ ನಡೆಯುತ್ತದೆ. ಹೆಸರು ಕೇಸರಿ ಬಾತ್. ಹಾಕುವುದು ಕೇಸರಿ ಬಣ್ಣ, ಅದೂ ಅಡುಗೆ ಬಣ್ಣವಲ್ಲ, ಜೀವ ಬಾಧಕ ರಾಸಾಯನಿಕ ಬಣ್ಣ. ಹಿಂದೆ ತುಳುನಾಡಿನಲ್ಲಿ ಮತ್ತು ಇತರೆಡೆ ನೀರುಳ್ಳಿ ಬಜಿಗೆ ಕಡಲೆ ಹಿಟ್ಟು ಬಳಸುತ್ತಿದ್ದರು. ಕಡಲೆ ಹಿಟ್ಟು ತುಟ್ಟಿ ಎಂದು ಈಗೆಲ್ಲ ಮೈದಾ ಹಿಟ್ಟು ಮಾಮೂಲು. ಅದು ಹೋಗಲಿ ಎಂದರೆ ಕಡಲೆ ಹಿಟ್ಟಿನ ಬಣ್ಣ ಬರಿಸಲು ಬೆರೆಸುವ ಬಣ್ಣ ಇದೆಯಲ್ಲ ಅದು ಕೆಡುಕು. ಹಾಲಿಗೆ ನೀರು ಬೆರೆಸುವುದು ಪುರಾತನ ವಿದ್ಯೆ. ನೀರು ಹಾಲನ್ನು ಮಂದ ಮಾಡಲು ಪಿಷ್ಟ ಬೆರೆಸುವುದು ಆಧುನಿಕ ವಿದ್ಯೆ. ಅಷ್ಟು ತೊಂದರೆ ಇಲ್ಲ, ಆದರೆ ಯೂರಿಯಾ ಇನ್ನೇನೇನೋ ಜೀವ ತೆಗೆವವನ್ನು ಬೆರೆಸುತ್ತಾರೆ ಎಂದರೆ ವ್ಯಾಪಾರವು ಜನ ದ್ರೋಹ ಎನ್ನದಿರಲಾದೀತೆ?

ಕೆಲವೊಮ್ಮೆ ಬಾಳೆಹಣ್ಣು ಇಲ್ಲವೆ ಇತರ ಹಣ್ಣು ಒಂದೇ ಜಾತಿಯವಾದರೂ ಬಾಯಿ ಕೆಡಿಸುತ್ತವೆ. ಏಕೆಂದರೆ ಬೆಳೆಯದ ಫಲ ಕೊಯ್ದು ಕ್ಯಾಲ್ಷಿಯಂ ಕಾರ್ಬೈಡ್, ತಾಮ್ರದ ಸಲ್ಫೇಟ್ ಮೊದಲಾದ ರಾಸಾಯನಿಕ ಬಳಸಿ ಬಲವಂತವಾಗಿ ಹಣ್ಣು ಮಾಡಿರುವುದೇ ಅದಕ್ಕೆ ಕಾರಣ. ಹೊಳೆಯಲು ಮೇಣದ ನೀರು ಚಿಮುಕಿಸುವುದೂ ಇದೆ. ತರಕಾರಿಗಳು ಸಹ ಇಂತಾ ಕೃತಕ ಚಿಕಿತ್ಸೆ ಪಡೆದು ನಮ್ಮನ್ನು ಯಮನತ್ತ ಎಳೆಯುತ್ತವೆ. ಭಾರತದ ಇಂದಿನ ಅತಿದೊಡ್ಡ ಸಮಸ್ಯೆ ಕಲಬೆರಕೆ ಅಡುಗೆ ಎಣ್ಣೆ. ಮುಖ್ಯವಾಗಿ ಅದಕ್ಕೆ ಪೆಟ್ರೋಲಿಯಂ ಮೂಲದ ವೈಟ್ ಆಯಿಲ್ ಬೆರೆಸಲಾಗುತ್ತದೆ. ಒಂದು ಸೂರ್ಯ ಇತ್ತು, ಕಲಬೆರಕೆ ಎಂದು ನಿಷೇಧಿಸಿದಾಗ ಅದು ಸೂರಿಯ ಎಂದು ಹೊಸ ಅಂಗಿ ಹಾಕಿತು. ಬೆಂಗಳೂರಿನಲ್ಲಿ ಹಲವರಿಗೆ ದನದ ಕೊಬ್ಬಿನ ಮಸಾಲೆ ದೋಸೆ ತಿನ್ನಿಸಿದ ತುಪ್ಪದ ಬ್ರಾಂಡ್ ಒಂದು ಜೈಲಿಗೆ ಹೋಯಿತು. ದಶಕದ ಬಳಿಕ ಆ ಬ್ರಾಂಡ್ ಮತ್ತೆ ಬಂದಿದೆ. ಈಗ ಕಲಬೆರಕೆ ಸುದ್ದಿಯಿಲ್ಲ. ಆಲೂಗಡ್ಡೆ ನುರಿದು ಕೂಡ ತುಪ್ಪಕ್ಕೆ ಸೇರಿಸುತ್ತಾರಂತೆ.

ಕಾಫಿ ಪುಡಿಗೆ ಚಿಕೋರಿ ಒಪ್ಪಿತ. ಆದರೆ ಹುಣಸೆ ಬೀಜದ ಸಿಪ್ಪೆಯ ಪುಡಿ ಬೆರೆಸುವುದು ಅನುಚಿತ. ಜೇನುತುಪ್ಪಕ್ಕೆ ಮೊಲಾಯ್ಸ್ ಮಾಮೂಲು. ಕಾಳು ಮೆಣಸಿಗೆ ಒಣಗಿಸಿದ ಪಪ್ಪಾಯಿ ಬೀಜ, ಸಾಸಿವೆಗೆ ಅರೆಮೊನ್ ಬೀಜ, ದಾಲ್ಚಿನ್ನಿಗೆ ಕ್ಯಾಸಿಯಾ ಚೆಕ್ಕೆ, ಜೀರಿಗೆಗೆ ಹುಲ್ಲಿನ ಬೀಜ ಎಂದು ಈ ಪಟ್ಟಿ ದೊಡ್ಡದು. ಆದರೆ ಐಸ್ ಕ್ರೀಮ್‍ಗೆ ಈತೈರ್ ಅಸಿಟೇಟ್, ವೈಟ್ರೆಲ್, ಮೆಣಸಿನ ಪುಡಿಗೆ ಬಿಡೈ, ಅರಿಸಿಣ ಪುಡಿಗೆ ಮೆಟಾಸಿಲ್, ಸಕ್ಕರೆಗೆ ಯೂರಿಯಾ, ಬೆಲ್ಲಕ್ಕೆ ವಾಷಿಂಗ್ ಸೋಡಾ, ಜ್ಯೂಸ್ ಜಾಮ್‍ಗಳಿಗೆ ಬೇಡದ ಬಣ್ಣ ಇವೆಲ್ಲ ಸಾವು ಗಿರಾಕಿಗಳು. ಇನ್ನು ಚಿಲ್ಲರೆ ಲಾಭಕ್ಕೆ ಕೆಲವರು ಅಕ್ಕಿ ಬೇಳೆಗೆ ಕಲ್ಲು ಮಣ್ಣು ಸೇರಿಸಿದರೆ ಹೋದದ್ದು ಮೋಸ, ಒಟ್ಟಾರೆ ಜೀವ ಬಚಾವು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ 9 ಗಂಟೆಯ ಬದಲು ಮಾರ್ಚ್ 1ರ ಶುಕ್ರವಾರ 2 ಗಂಟೆಗೆ ನಡೆಯುವುದು ಮುಸ್ಲಿಮರಿಗೆ ನಮಾಜಿಗೆ ಅನುಕೂಲ ಮಾಡಲು ಎಂದು ಚಕ್ರವರ್ತಿ ಸೂಲಿಬೆಲೆ ಪೆÇೀಸ್ಟ್ ಮಾಡಿದ್ದ. ಮಾರ್ಚ್ 1ರಂದು ಸೆಕೆಂಡ್ ಪಿಯುಸಿ ಪರೀಕ್ಷೆ ಬೆಳಿಗ್ಗೆ ಮಧ್ಯಾಹ್ನ ಅದೇ ಹಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತದೆ. ಇಷ್ಟೂ ತಿಳಿಯದ ಸೂಲಿಬೆಲೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಏನೋ ಆಗಿದ್ದ. ಪಠ್ಯದಲ್ಲೂ ಜಾತಿ ದ್ವೇಷ ಬಿತ್ತಿದ್ದ. ನಾನು ಮಂತ್ರಿ ಆಗುತ್ತಲೇ ಆ ಕಲಬೆರಕೆ ಕಿತ್ತು ಬಿಸಾಕಿದೆ ಎಂದೂ ಮಧು ಬಂಗಾರಪ್ಪ ಹೇಳಿದ್ದಾರೆ. ಹೊನ್ನಾವರದಲ್ಲಿ ಹುಟ್ಟಿದ ಕೊಂಕಣಿ ಬಂಗಾರ ಕೆಲಸದ ಆಚಾರಿ ಮಿಥುನ್ ಚಕ್ರವರ್ತಿ ಬಟ್ಕಳದ ಅಂಜುಮನ್‍ನಲ್ಲಿ ಅವರ ಸಹಾಯದಿಂದ ಓದಿದವನು. ಬೆಂಗಳೂರು ಸೇರಿ ಚಕ್ರವರ್ತಿ ಸೂಲಿಬೆಲೆ ಎಂದು ಹೆಸರು ಬದಲಿಸಿಕೊಂಡು ಸದಾ ಸಮಾಜ ಒಡೆಯುವ ಸಾಹಿತ್ಯ ರಚನೆಯಲ್ಲಿ, ಸುಳ್ಳು ಇತಿಹಾಸ ಸೃಷ್ಟಿಯಲ್ಲಿ ಈಡುಗೊಂಡಿರುವ ಆರೋಪ ಹೊತ್ತಿರುವ ವ್ಯಕ್ತಿ.

ಸಂಸತ್ತಿನಲ್ಲಿ ಕಡತಕ್ಕೆ ಸೇರಿದ್ದರಲ್ಲಿ ಅಸಾಂವಿಧಾನಿಕ ಶಬ್ದ ಇದ್ದರೆ ಅದನ್ನು ತೆಗೆಯುವುದು ಕ್ರಮ. ಆದರೆ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ಕಡತದಿಂದ ತೆಗೆದಾಗ ಆ ಮಾನದಂಡ ಅನುಸರಿಸಿಲ್ಲ. ಯಾರದೇ ಹೆಸರು ಹೇಳದಿದ್ದರೂ ಖರ್ಗೆಯವರ ಮಾತು

ಪ್ರಧಾನಿಯವರನ್ನು ಕುರಿತಾಗಿತ್ತು ಎನ್ನಲಾಗಿದೆ. ಅದಕ್ಕಾಗಿ ಕಡತದಿಂದ ತೆಗೆಯಲಾಗಿದೆ ಎನ್ನಲಾಗಿದೆ. ರಾಜ್ಯಸಭೆಯಲ್ಲಿ ಉತ್ತರಿಸುತ್ತ ಮೋದಿಯವರು ಕಾಂಗ್ರೆಸ್ಸನ್ನು, ಖರ್ಗೆಯವರನ್ನು ಟೀಕಿಸಿದರು. ಆದರೆ ಹೆಸರು ಹೇಳದ ಟೀಕೆ ನನಗೇ ಎಂದುಕೊಂಡದ್ದೇಕೆ? ಕುಂಬಳಕಾಯಿ ಕಳ್ಳ…., ಕಳ್ಳನ ಮನಸ್ಸು ಹುಳ್ಳಗೆ ಇತ್ಯಾದಿ ಗಾದೆಗಳು ಇದಕ್ಕೆ ಹುಟ್ಟಿವೆಯೋ?

ಗೃಹ ಮಂತ್ರಿ ಅಮಿತ್ ಶಾ, ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕನಿಮೊಳಿ, ಲಾಲು ಪ್ರಸಾದ್ ಯಾದವ್ ಎಂದು ಸಾಕಷ್ಟು ಜನರು ನಾನಾ ಕಾರಣಕ್ಕೆ ಜೈಲಿಗೆ ಹೋಗಿ ಬಂದ ರಾಜಕಾರಣಿಗಳು ಇದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ಸಂಪರ್ಕ ಬಲದಿಂದ ಜೈಲು ತಪ್ಪಿತು ಎಂದಿದ್ದರು. ಕಳೆದ ಮೂರು ವರುಷಗಳಿಂದ ಇಡಿ- ಜಾರಿ ನಿರ್ದೇಶನಾಲಯ ಇನ್ನೊಂದು ಕಲಬೆರಕೆ ನಡೆಸಿದೆ. ಪ್ರತಿಪಕ್ಷದ ನಾಯಕರ ಮೇಲೆ ಮೊಕದ್ದಮೆ. ಅವರೇನಾದರೂ ಬಿಜೆಪಿ ಸೇರಿದರೆ ಮೊಕದ್ದಮೆ ವಜಾ. ಇದರಿಂದ ಇಡಿಗಾಗಲಿ, ಅದನ್ನು ದುರುಪಯೋಗಿಸಿದ ಮೋದಿ ಸರಕಾರಕ್ಕಾಗಲಿ ನಾಚಿಕೆ ಆಗಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ಖರೀದಿ ಸರಕಾರ ತರಲು ಯಡಿಯೂರಪ್ಪನವರ ಕಳ್ಳ ಹಣ ಬೇಕು; ಸರಕಾರ ಬಂದ ಮೇಲೆ ಅವರು ಬೇಡ. ಇದು ಮೂರ್ಮೂರು ಬಾರಿ ಆಯಿತು. ಅಂದರೆ ಬಿಜೆಪಿ ಹೈಕಮಾಂಡಿಗೆ ಗುಲಾಮಗಿರಿ ಮುಖ್ಯಮಂತ್ರಿ ಬೇಕು. ಯಡಿಯೂರಪ್ಪ ಆಗರು. ಆದರೆ ಭ್ರಷ್ಟಾಚಾರದ, ಇಡಿ ಬೆದರಿಕೆ ಅಡಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸುವುದು ಸುಲಭ. ಈಗ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರು ಗುಲಾಮಗಿರಿ ಮಾಡುವುದರಲ್ಲಿ ಕಾಂಗ್ರೆಸ್ ಮೇಲೋ, ಬಿಜೆಪಿ ಜೋರೋ ಎಂಬ ಡಿಬೆಟ್‍ನಲ್ಲಿ ತೊಡಗಿದ್ದಾರೆ

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.