ಪುತ್ತೂರಿನಲ್ಲಿ ಡಿ.20 ರಂದು ‘ಕಲಾರ್ಣವ-2025’ ಗಡಿ-ಸಂಸ್ಕೃತಿ ಉತ್ಸವ
ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ದ.ಕ. ಜಿಲ್ಲಾಡಳಿತ ವತಿಯಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ಸಹಯೋಗದಲ್ಲಿ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರದಲ್ಲಿ ಗಡಿ-ಸಂಸ್ಕೃತಿ- ಉತ್ಸವದ ಅಂಗವಾಗಿ ‘ಕಲಾರ್ಣವ-2025’ ಭಾವ-ರಾಗ-ತಾಳ ಕಾರ್ಯಕ್ರಮ ಡಿಸೆಂಬರ್ 20 ರಂದು ಸಂಜೆ 4.30 ಗಂಟೆಯಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ.

ಸಂಜೆ 5.30ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸುವರು. ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೌರವ ಉಪಸ್ಥಿತಿ ಇರುವರು. ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳು, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಮತ್ತಿತರರು ಭಾಗವಹಿಸುವರು.
ಸಂಜೆ 4.30ರಿಂದ ವಿವಿಧ ಜಾನಪದ ನೃತ್ಯ ವೈವಿಧ್ಯ ನಡೆಯಲಿದ್ದು, 6.15ರಿಂದ ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸಕೃತ ಬಾಲ ಕಲಾವಿದ ಮಾಸ್ಟರ್ ಶಮಂತಕ ಇವರಿಂದ ಭರತನಾಟ್ಯ ಪ್ರದರ್ಶನ, ರಾತ್ರಿ 7 ರಿಂದ ಅಂತಾರಾಷ್ಟ್ರೀಯ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ವಯಲಿನ್ ವೈಭವ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಇವರಿಬ್ಬರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು ಅಕಾಡೆಮಿ ಸ್ಥಾಪಕ ಟ್ರಸ್ಟಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಂಗಾ ಶಶಿಧರನ್ ಮೊದಲ ಬಾರಿ ಪುತ್ತೂರಿಗೆ
ಅಂತಾರಾಷ್ಟ್ರೀಯ ಖ್ಯಾತಿಯ ಕೇರಳ ಮೂಲದ ವಯಲಿನ್ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಇದೇ ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ದೇಶ, ವಿದೇಶಗಳ ಸುಮಾರು 300ಕ್ಕೂ ಅಧಿಕ ವೇದಿಕೆಗಳಲ್ಲಿ ಈಕೆ ವಯಲಿನ್ ಕಛೇರಿ ನೀಡಿದ್ದಾರೆ. ಈಕೆಯ ಪ್ರತಿಭೆಗೆ ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ.
ಮಾಸ್ಟರ್ ಶಮಂತಕ ಧಾರವಾಡ ಮೂಲದ ಎಳೆ ಭರತನಾಟ್ಯ ಪ್ರತಿಭೆ. ತಾಯಿ ವಿದುಷಿ ಸವಿತಾ ಹೆಗ್ಡೆ ಮಾರ್ಗದರ್ಶನದಲ್ಲಿ ಭರತನಾಟ್ಯ, ತಂದೆ ಡಾ.ಗೋಪಿಕೃಷ್ಣರಿಂದ ತಬಲಾ, ಮೃದಂಗ ಹಾಗೂ ಯಕ್ಷಗಾನ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ಪ್ರಸ್ತುತ ಚೆನ್ನೈನ ಶ್ರೀ ಅತುಲ್ ಬಾಲು ಅವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ.ಹತ್ತಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಪ್ರತಿಭೆ.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬಗ್ಗೆ-
2010ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತನ್ನ ಆರ್ಥಿಕ ಇತಿಮಿತಿಯಲ್ಲಿ ಪ್ರಾಧಿಕಾರದ ಆಶಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಗಡಿ ಭಾಗದ ಕನ್ನಡಿಗರ ಹಾಗೂ ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಆಶೋತ್ತರಗಳು ಮತ್ತು ಬೇಡಿಕೆಗಳನ್ನು ಪೂರೈಸುವ ದಿಶೆಯಲ್ಲಿ ಸರ್ಕಾರದ ಸಹಕಾರದಲ್ಲಿ ಸ್ಪಂದಿಸುತ್ತಾ ಬಂದಿದೆ. ಗಡಿನಾಡಿನ ಕನ್ನಡಿಗರಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ನೃತ್ಯೋಪಾಸನಾ ಕಲಾ ಅಕಾಡೆಮಿ ಬಗ್ಗೆ-
2004ರಲ್ಲಿ ಸ್ಥಾಪನೆಯಾದ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು, ಉಪ್ಪಿನಂಗಡಿ, ಕುಕ್ಕೆ ಸುಬ್ರಹ್ಮಣ್ಯ, ವಿಟ್ಲ ಮುಂತಾದ ಕಡೆಗಳಲ್ಲಿ ನೃತ್ಯ ಶಿಕ್ಷಣ ನೀಡುತ್ತಿದೆ. ವಿದುಷಿ ಶಾಲಿನಿ ಆತ್ಮಭೂಷಣ್ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲೂ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ. ನೃತ್ಯ ಶಿಕ್ಷಣ ಪೋಷಣೆ ಯೋಜನೆಯಡಿ ಹಿಂದುಳಿದ ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯ ನೃತ್ಯ ತರಗತಿ ನಡೆಸಲಾಗುತ್ತಿದೆ. ಸಾಧಕ ಹಿರಿಯ ಕಲಾವಿದರಿಗೆ ನೃತ್ಯೋಪಾಸನಾ ಗೌರವ ಪುರಸ್ಕಾರ ನೀಡುತ್ತಾ ಬಂದಿದೆ.


















