ಕಲ್ಲಬೆಟ್ಟು ಗಣೇಶೋತ್ಸವದಲ್ಲಿ ಧನಸಂಗ್ರಹ ಮಾಡಿ ಅನಾರೋಗ್ಯ ಪೀಡಿತೆಗೆ ನೆರವು ನೀಡಿದ ವಿದ್ಯಾರ್ಥಿನಿಯರು

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿ ಆನಾರೋಗ್ಯ ಪೀಡಿತೆಯೋರ್ವರ ಚಿಕಿತ್ಸೆಗಾಗಿ ಧನ ಸಂಗ್ರಹ ಮಾಡಿ ಹಸ್ತಾಂತರ ಮಾಡಿ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾಲೂಕಿನ ಕಲ್ಲಬೆಟ್ಟು ಗ್ರಾಮದ ನಿವಾಸಿಗಳಾದ ಮಹಾವೀರ ಕಾಲೇಜಿನ ವಿದ್ಯಾರ್ಥಿನಿಯರಾದ ತುಷಾರ, ಅನೂಷಾ, ತುಷಿತಾ ಹಾಗೂ ಪ್ರತಿಕ್ಷಾ ಎಂಬ ವಿದ್ಯಾರ್ಥಿಯರು ಅನಾರೋಗ್ಯ ಪೀಡಿತೆಯ ಚಿಕಿತ್ಸೆಯ ನೆರವಿಗೆ ಸ್ಪಂದಿಸಿದವರು.

ಕಲ್ಲಬೆಟ್ಟುವಿನಲ್ಲಿ ನಡೆದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಈ ನಾಲ್ವರು ವಿದ್ಯಾರ್ಥಿಗಳು ಭಕ್ತರಲ್ಲಿಗೆ ಧನ ಸಂಗ್ರಹದ ಬಾಕ್ಸ್ ಗಳನ್ನು ಹಿಡಿದುಕೊಂಡು ಹೋಗಿ ಸುಮಾರು 11,116 ರೂವನ್ನು ಸಂಗ್ರಹಿಸಿದ್ದು ಇದನ್ನು ಕಲ್ಲಬೆಟ್ಟುವಿನ ಕಮಲಾಕ್ಷಿ ಅವರ ಚಿಕಿತ್ಸೆಗಾಗಿ ನೀಡಿದ್ದಾರೆ.

ಕೂಲಿ ಕಾರ್ಮಿಕೆಯಾಗಿರುವ ಕಮಲಾಕ್ಷಿ ಅವರು ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನ ಶುಚಿತ್ವಗೊಳಿಸುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರು ರಕ್ತದೊತ್ತಡದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.

ಅವರ ಪತಿಯೂ ಕೂಲಿಕಾರ್ಮಿಕರಾಗಿದ್ದು ಬಡಕುಟುಂಬದವರಾಗಿರುವ ಇವರ ಸ್ಥಿತಿಯನ್ನು ಕಂಡ ವಿದ್ಯಾರ್ಥಿನಿಯರು ಧನ ಸಂಗ್ರಹ ಮಾಡಿ ಚಿಕಿತ್ಸೆಯ ನೆರವಿಗೆ ಸ್ಪಂದಿಸುತ್ತ ಈ ಕಾರ್ಯವನ್ನು ಕೈಗೊಂಡಿದ್ದರು. ಅದರಂತೆ ಸಂಗ್ರಹವಾಗಿರುವ ಧನವನ್ನು ಕಮಲಾಕ್ಷಿ ಅವರ ಮನೆಗೆ ತೆರಳಿ ಹಸ್ತಾಂತರಿಸುವ ಮೂಲಕ ಗಮನ ಸೆಳೆದಿದ್ದಾರೆ.

Related Posts

Leave a Reply

Your email address will not be published.