ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ – ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಮುದ್ದಣ ಸಾಹಿತ್ಯೋತ್ಸವ – ೪೩ನೇ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ಭಾನುವಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ನಡೆಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಆಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲ, ಕಲಾವಿದ ಪ್ರೊ| ಎಂ.ಎಲ್. ಸಾಮಗ ಉದ್ಘಾಟಿಸಿ ಮಾತನಾಡಿ ನಾನೇ ಶ್ರೇಷ್ಠ ಎಂಬ ಭಾವನೆಯಿಂದಾಗಿ ಬೇರೆ ಬೇರೆ ಮಾರ್ಗಗಳನ್ನು ಅನುಸರಿಸಿ ಆಗತ್ಯವಿಲ್ಲದಿದ್ದರೂ ಅರ್ಹತೆ ಇಲ್ಲದಿದ್ದರೂ ಎಲ್ಲ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರೊಂದಿಗೆ ಬೆರೆತು ಸಜ್ಜನಿಕೆಯ ಸಮಾಜ ನಿರ್ಮಿಸುವ ಆಶಯ ಇಂದು ಮಸುಕಾಗುತ್ತಿದೆ. ಆದರೆ ಜನರು ಮತ್ತು ಸಾಹಿತ್ಯಾಸಕ್ತರು ಯಾವುದು ಸತ್ವ ಪೂರ್ಣವಾದುದು, ಯಾವುದು ನೀರಸವಾದುದು ಎಂಬುದನ್ನು ಗಮನಿಸುತ್ತಿರುತ್ತಾರೆ. ಇಂಥ ಸಂಕ ಅರ್ಹರಾದವರಿಗೆ ಮನ್ನಣೆ ಸಿಗಬೇಕಾಗಿದೆ ಎಂದರು.

ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಈ ಬಾರಿಯ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ , ರಾಯಚೂರಿನ ಡಾ. ಚಿದಾನಂದ ಸಾಲಿ ಅವರ ಕನ್ನಡಿಯಲ್ಲಿ ಮನುಷ್ಯ ಮಾತ್ರ' ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಗ್ರಾಮಾಂತರ ಪ್ರದೇಶದಲ್ಲಿದ್ದುಕೊಂಡು ನಾಡೇ ಬೆರಗಾಗುವಂತೆ, ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಂಘದ ಚಟುವಟಿಕೆಗಳು ಪ್ರಶಂಸಾರ್ಹವಾಗಿದೆ' ಎಂದ ಅವರು ಕನ್ನಡ ಸಂಘಕ್ಕೆ ಸರಕಾರದ ವತಿಯಿಂದ ಆರ್ಥಿಕ ನೆರವು ಒದಗಿಸಲು ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದರು ಸಂಘದಲ್ಲಿ ಹೊಸತಾಗಿ ಸ್ಥಾಪನೆಯಾದ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಇವರಿಗೆ, ಗಮಕ ವಾಚನ ಪ್ರಶಸ್ತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಇವರಿಗೆ ಹಾಗೂ ಶಿಲ್ಪ ಗುರು ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಶಾಮರಾಯ ಆಚಾರ್ಯ ಸ್ಮಾರಕ ಶಿಲ್ಪಕಲಾ ಪ್ರಶಸ್ತಿ ಬಿ.ಎಸ್. ಭಾಸ್ಕರ ಆಚಾರ್ಯ ಕಾರ್ಕಳ ಇವರಿಗೆ ಹರಿಕೃಷ್ಣ ಪುನರೂರು ಪ್ರದಾನಗೈದರು. ಮೂಡುಬಿದಿರೆ ತಾಲೂಕು ಕ. ಸಾ. ಪರಿಷತ್ತಿನ ಅಧ್ಯಕ್ಷ ಪ್ರೊ| ವೇಣುಗೋಪಾಲ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಪ್ರಶಸ್ತಿಗಳ ಪ್ರಾಯೋಜಕರಾದ ಸತೀಶ್ ಕುಮಾರ್ ಕೆಮ್ಮಣ್ಣು, ಶ್ರೀಮತಿ ಯಾಮಿನಿ ಭಟ್ ಉಡುಪಿ ಮತ್ತು ಶಿಲ್ಪಿ ಕೆ. ಸತೀಶ ಆಚಾರ್ಯ ಕಾರ್ಕಳ ಅವರನ್ನು ಗೌರವಿಸಲಾಯಿತು.

ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಪ್ರಸ್ತಾವನೆ, ಕಾರ್ಯಕ್ರಮ ನಿರೂಪಣೆಗೈದರು. ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಅಪರಾಹ್ನಪಂಪ ಭಾರತ-ಭೀಷ್ಮ ಸೇನಾಽಪತ್ಯ’ ವಿಷಯದಲ್ಲಿ ಗಮಕ ವಾಚನ (ಮಂಜುಳಾ ಸುಬ್ರಹ್ಮಣ್ಯ), ಪ್ರವಚನ (ಡಾ. ರಾಘವೇಂದ್ರ ರಾವ್) ಕಾರ್ಯಕ್ರಮ ನಡೆಯಿತು. ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಬಿಡುಗಡೆಗೊಳಿಸಿದರು ವಿವಿಧ ದತ್ತಿ ನಿಧಿಗಳ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ. ರಾಘವೇಂದ್ರ ರಾವ್ (ಗಮಕ ಕಲಾ ಪ್ರವಚನ ಪ್ರಶಸ್ತಿ), ಡಾ. ಚಿದಾನಂದ ಸಾಲಿ (ಮುದ್ದಣ ಕಾವ್ಯ ಪ್ರಶಸ್ತಿ ), ಬಿ.ಎಸ್. ಭಾಸ್ಕರ ಆಚಾರ್ಯ (ಶಿಲ್ಪಕಲಾ ಪ್ರಶಸ್ತಿ), ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ( ಗಮಕ ಕಲಾ ವಾಚನ ಪ್ರಶಸ್ತಿ) ಇವರಿಗೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಯಿತು.

Related Posts

Leave a Reply

Your email address will not be published.