ಹೊಳೆಗೆ ಹಾರಿದ್ದ ಯುವಕನ ಪತ್ತೆಗೆ ಶೋಧ

ಕಳೆದ ಜು.6 ರಂದು ಕಾಪು ಠಾಣಾ ವ್ಯಾಪ್ತಿಯ ಮಣಿಪುರ ದೆಂದುರುಕಟ್ಟೆ ಅಲೆವೂರು ರಸ್ತೆಯ ಸೇತುವೆಯ ಬಳಿ ಹೊಳೆಗೆ ಹಾರಿರುವ ಶಂಕೆಯಿರುವ ಯುವಕ 28 ವರ್ಷದ ಪುನಿತ್ ಈವರೆಗೂ ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗಿನಿಂದಲೇ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ, ಪ್ರವೀಣ್ ಕುರ್ಕಾಲು, ಅಶೋಕ್ ದೆಂದೂರು ಕಟ್ಟೆ ಮತ್ತು ಉಡುಪಿ ಜಿಲ್ಲಾ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇತುವೆಯಿಂದ ಸುಮಾರು 8 ಕಿಲೋ ಮೀಟರ್ ದೂರದ ವರಗೆ ಹುಡುಕಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಇದೀಗ ಆತನ ಸಂಬಂದಿಗಳು ಕಾಪು ಠಾಣೆಯಲ್ಲಿ ಯುವಕ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದು ನಾಪತ್ತೆ ಪ್ರಕರಣ ದಾಖಲಾಗಿದೆ.ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಸ್ಕೂಟರ್‍ನಲ್ಲಿ ಆತನ ಪರ್ಸ್, ಪೆÇೀನ್ ಇತ್ಯಾದಿ ಸಿಕ್ಕಿದ್ದು, ಆ ಕಾರಣದಿಂದ ಆತ ಹೊಳೆಗೆ ಹಾರಿರ ಬಹುದೆಂಬ ಶಂಕೆ ವ್ಯಕ್ತ ವಾಗಿತ್ತು.
ಘಟನೆ ನಡೆದ ದಿನ ಮೃತದೇಹಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ವಿಪರೀತ ಮಳೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿ ಕೈಬಿಡಲಾಗಿತ್ತು. ಘಟನೆ ನಡೆದು 6 ದಿನದ ಬಳಿಕವೂ ಮೃತದೇಹ ಪತ್ತೆಯಾಗಿಲ್ಲ. ನದಿ ನೀರಿನ ಹರಿವು ತೀವ್ರವಾಗಿರುವುದರಿಂದ ಕೊಚ್ಚಿಹೋಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಮುಳುಗು ತಜ್ಞರು