ಶೌರ್ಯ ವಿಪತ್ತು ಘಟಕದಿಂದ ಶಾಂಭವಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ತ್ಯಾಜ್ಯಗಳ ತೆರವು

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲ ಬಳಿ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ ತ್ಯಾಜ್ಯಗಳು ಸಿಲುಕಿ ಹಾಕಿಕೊಂಡಿದ್ದು, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಶೌರ್ಯ ವಿಪತ್ತು ಘಟಕ ಮುಂದಾಗಿದ್ದು, ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತ್ಯಾಜ್ಯಗಳನ್ನು ತೆರವು ಮಾಡಿದರು.

ಕಿಂಡಿ ಅಣೆಕಟ್ಟುವಿಗೆ ಕಡಿದು ಹಾಕಿದ ಬೃಹತ್ ಗಾತ್ರದ ಮರದ ದಿಮ್ಮಿ , ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು. ಹತ್ತಿರದ ಕೃಷಿ ಭೂಮಿ, ತೋಟ, ಮನೆಗಳು ಮುಳುಗುವ ಭೀತಿಯಲ್ಲಿದ್ದವು ಇದನ್ನು ತೆರವುಗೊಳಿಸಲು ಗ್ರಾಮ ಪಂಚಾಯತಿಗೆ ಕಠಿಣ ಸವಾಲಾಗಿತ್ತು. ತಕ್ಷಣ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುರೇಖಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಣೂರು ಒಕ್ಕೂಟದ ಸೇವಾ ಪ್ರತಿನಿಧಿಯಾದ ಅರುಣಿಯವರಿಗೆ ಮಾಹಿತಿಯನ್ನು ನೀಡಿ ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದದಿಮ್ಮಿ ಹಾಗು ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಮನವಿಯನ್ನು ಮಾಡಲಾಯಿತು.

ಪಂಚಾಯತ್ ಮನವಿಗೆ ಸ್ಪಂದಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಆ ಕೂಡಲೇ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ಇಳಿದು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯನ್ನು ಮಾಡಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿ ಹಾಗೂ ತ್ಯಾಜ್ಯವನ್ನು ವಿಲೇವಾರಿ ಮಾಡಿದರು.

ಅದಲ್ಲದೆ ಗ್ರಾಮದಲ್ಲಿ ಪ್ರತಿ ಸ್ವಚ್ಛತೆ, ಶಾಲೆಗಳಿಗೆ ಕೈತೋಟ ಹಾಗೂ ಗಾಳಿ ಮಳೆಯಿಂದ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದಾಗ ಅದನ್ನು ತೆರವುಗೊಳಿಸುವಂತಹ ಕಾರ್ಯದಲ್ಲಿ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತೊಡಗಿಕೊಂಡು ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ್ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ, ಸೇವಾ ಪ್ರತಿನಿಧಿ ಶ್ರೀಮತಿ ಅರುಣಿ, ಪಂಚಾಯಿತಿ ಸಿಬ್ಬಂದಿ ವಸಂತರ್, ಸ್ಥಳೀಯರಾದ ಅಶೋಕ್ ಪಿಂಟೊ ಮೊದಲಾದವರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.