ಕೊಯಿಲದ ಯುವಕ ವಿದೇಶದಲ್ಲಿ ಆತ್ಮಹತ್ಯೆ

ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಭಾನುವಾರ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಆತ್ಮ ಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32) ಎಂದು ಗುರುತಿಸಲಾಗಿದೆ. ಇವರು ಕೊಲ್ಲಿರಾಷ್ಟ್ರದ ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಇವರ ಸಂಬಂಧಿ ಯುವಕ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬ ಯುವಕ ಕೂಡಾ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಸಂದೇಶ್ ಅವರು ಬೇಗ ಕರ್ತವ್ಯ ಮುಗಿಸಿ ಕೊಠಡಿಗೆ ಆಗಮಿಸಿ ಮಧ್ಯಾಹ್ನದ ಒಳಗೆ ಸುಮಾರು ೧೦.೩೦ ರವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಕೆಲವು ಹೊತ್ತಿನ ಬಳಿಕ ಚರಣ್ ಅವರು ಸಂದೇಶ್ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಬಂದ್ ಆಗಿತ್ತು. ಕದತಟ್ಟಿದರೆ ಯಾವುದೇ ಉತ್ತರ ಬಾರದೇ ಹೋದಾಗ ಸಂಶಯಗೊಂಡು ಗಾಬರಿಯಿಂದ ಸಂದೇಶ್ ಸಹೋದರ ಸಂತೋಷ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಕೊಠಡಿಯ ಒಂದು ಕೀ ಸಂತೋಷ್ ಅವರಲ್ಲಿ ಇದ್ದುದರಿಂದ ಬಾಗಿಲು ತೆರೆದು ನೋಡುವಾಗ ಕೊಠಡಿಯ ಒಳಗಿನ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿ ಕಂಡು ಬಂತು, ಯುವಕ ಮೃತಪಟ್ಟಿರುವುದು ಆಗಲೆ ದೃಢಪಟ್ಟಿತ್ತು. ಆ ದೇಶದ ನಿಯಮಾಳಿಗಳ ಪ್ರಕಾರ ಮರಣೋತ್ತರ ಪರೀಕ್ಷೆಗಳ ಪ್ರಕ್ರಿಯೆ ಮುಗಿದು ಮಂಗಳವಾರ ಅಥವಾ ಬುಧವಾರ ಮೃತದೇಹ ಊರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ.


ಎಂಟು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು:
ಸಂದೇಶ ಸಹೋದರ ಸಂತೋಷ್ ಏಳು ವರ್ಷಗಳ ಹಿಂದೆ ಮಸ್ಕತ್‌ಗೆ ಉದ್ಯೋಗಕ್ಕೆ ತೆರಳಿದ್ದರು. ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನೈನಲ್ಲಿ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿಯಿಲ್ಲದ ಉದ್ಯೋಗ ಇದ್ದು ಯಾವುದೇ ಸಮಸ್ಯೆಗಳು ಇರಲಿಲ್ಲ ಎಲ್ಲವೂ ಸುಸೂತ್ರವಾಗಿಯೇ ಇತ್ತು, ಅಣ್ಣ ತಮ್ಮ ಸಂತೋಷವಾಗಿಯೇ ಇದ್ದರು , ಕೇವಲ ಒಂದು ಲೈನ್ ಸಾರಿ ಅಣ್ಣ ಎಂದು ಬರೆದಿಟ್ಟು ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲ ತಿಳಿಸಿದ್ದು, ಆತ್ಮಹತ್ಯೆಗ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರಿಗೆ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಸಂತೋಷ್, ಊರಿನಲ್ಲಿ ಅಟೋ ಚಾಲಕನಾಗಿರುವ ಸಹೋದರ ಸತೀಶ್ ಹಾಗೂ ತಾಯಿ ವಿಮಲ ಇದ್ದಾರೆ.

Related Posts

Leave a Reply

Your email address will not be published.