ಕುಂದಾಪುರ: ನವಜಾತ ಶಿಶು ಸಾವಿನ ಪ್ರಕರಣ: ಜಿಲ್ಲಾಧಿಕಾರಿ ಭರವಸೆ ಬಳಿಕ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಡಿಎಚ್‍ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರ ಜೊತೆ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಉಪವಿಭಾಗಾಧಿಕಾರಿ, ಡಿಎಚ್‍ಓ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಅಹೋರಾತ್ರಿ ಮೌನ ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸತೊಡಗಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪೆÇಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪ್ರತಿಭಟನಾನಿರತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯಶವಂತ ಗಂಗೊಳ್ಳಿ, ಕರುಳಬಳ್ಳಿ ಸುತ್ತಿಕೊಂಡು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ನಾವು ಪ್ರಕರಣ ದಾಖಲಿಸುತ್ತೇವೆ ಎಂದರೆ ಮುಂದೆ ನಿಮಗೆ ತೊಂದರೆಯಾಗುತ್ತದೆ ಎಂದು ನಮ್ಮನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಗುವಿನ ತಂದೆ ಶ್ರೀನಿವಾಸ್ ಮಾತನಾಡಿ, ಮದುವೆಯಾಗಿ ನಾಲ್ಕು ವರ್ಷದ ಬಳಿಕ ನಮಗೆ ಮೊದಲ ಮಗು ಹುಟ್ಟುವ ಸಂತಸದಲ್ಲಿದ್ದೆವು. ನೂರಾರು ಆಸೆಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ವೈದ್ಯರ ನಿರ್ಲಕ್ಷದಿಂದ ಎಲ್ಲಾ ಆಸೆಗಳು ನುಚ್ಚುನೂರಾಗಿದೆ ಎಂದು ನೋವು ಹೇಳಿಕೊಂಡರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಗು ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಇದ್ದರೆ ತಂಡ ರಚಿಸಿಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸ್ತ್ರೀತಜÐರ ಸಂಖ್ಯೆ ವಿರಳ ಇದೆ. ಯಾವುದೇ ಒಬ್ಬ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕಾದರೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ ಸರ್ಕಾರದ ಗಮನಕ್ಕೆ ತರುತ್ತೇವೆ. ತಾತ್ಕಾಲಿಕವಾಗಿ ವೈದ್ಯರನ್ನು ಬೇರೆಡೆಗೆ ವರ್ಗಾಯಿಸುತ್ತೇವೆ. ಇಲ್ಲಿ ಬೇರೆ ವೈದ್ಯ ನೇಮಕ ಮಾಡುತ್ತೇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತಾಯಿ, ಶಿಶುವಿನ ಮರಣ ಸಂಖ್ಯೆ ಕಡಿಮೆ ಇದೆ. ಆಗಬಾರದ ಘಟನೆ ಆಗಿ ಹೋಗಿದೆ. ನಿಯಮಾನುಸಾರ ಕ್ರಮ ಜರಗಿಸುತ್ತೇವೆ ಎಂದರು.

ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಪ್ರತಿಕ್ರಿಯಿಸಿ, ಸಂತ್ರಸ್ತರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದನ್ವರ ದೂರನ್ನು ವೈದ್ಯಕೀಯ ಮಂಡಳಿಗೆ ವರ್ಗಾಯಿಸಿ ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಓ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ಟಿಎಚ್‍ಒ ಪ್ರೇಮಾನಂದ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ರೊಬೆಲ್ಲೋ, ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣಾ ನಿರೀಕ್ಷಕ ನಂದ ಕುಮಾರ್ ಮೊದಲಾದವರು ಹಾಜರಿದ್ದರು

Related Posts

Leave a Reply

Your email address will not be published.