ಮಂಗಳೂರು – ರಾ.ಹೆದ್ದಾರಿಗೆ ಸ್ವಾಧೀನಪಡಿಸಿದ ಭೂಮಿಗೆ ಪರಿಹಾರಕ್ಕೆ ಆಗ್ರಹ
ಮಂಗಳೂರಿನ ನಂತೂರಿನಿಂದ ಮೂಡುಬಿದರೆಯ ತನಕ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಆರೋಪಿಸಿ ಎನ್.ಎಚ್. 169 ಭೂ ಮಾಲೀಕರ ಹೋರಾಟ ಸಮಿತಿ ವತಿಯಿಂದ ನಂತೂರಿನ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅವರು, ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ ಸೂಕ್ತ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವವರೆಗೂ ಒಂದಿಂಚೂ ಜಾಗವನ್ನು ಬಿಡಲಾಗದು ಎಂದು ಹೇಳಿದ್ದಾರೆ. ಸರಕಾರವು ಭೂ ಕಳೆದುಕೊಂಡವರಿಗೆ ಪರಿಹಾರ ಹಣ ಭಿಕ್ಷೆ ನೀಡುವುದಲ್ಲ. ತಮ್ಮ ಮೌಲ್ಯಯುತ ಆಸ್ತಿಯನ್ನು ಕಳೆದುಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕಾದರೆ ಸೂಕ್ತ ಪರಿಹಾರ ಒದಗಿಸುವುದು ಸರಕಾರದ ಕರ್ತವ್ಯ.
ರಸ್ತೆ ನಿರ್ಮಾಣದ ಬಳಿಕ ಅಲ್ಲಿ ಟೋಲ್ ಮೂಲಕ ಹಣ ಸಂಗ್ರಹಿಸುತ್ತಾರೆ. ಹಾಗಿರುವಾಗ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಈ ರೀತಿಯ ವಿಳಂಬ ಧೋರಣೆ ಯಾಕೆ ಎಂದು ಅವರು ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತನ್ನ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಶತಾಯುಷಿ ಸೀತಾರಾಮ ಶೆಟ್ಟಿಯವರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಸಂಚಾಲಕ ಪ್ರಕಾಶ್ಚಂದ್ರ, ಬ್ರಿಜೇಶ್ ಶೆಟ್ಟಿ ಮಿಜಾರು, ವಿಶ್ವಜಿತ್, ರತ್ನಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.