ಮಂಗಳೂರು: ಘನತ್ಯಾಜ್ಯ ನಿರ್ವಹಣೆ ಪ್ಯಾಕೇಜ್ ರದ್ದು, ಪ್ಯಾಕೇಜ್ ಅವೈಜ್ಞಾನಿಕವಾಗಿದೆ ಎಂದ ವಿಪಕ್ಷ ಸದಸ್ಯರು
ಮಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಗುತ್ತಿಗೆ ನೀಡಿರುವ ಹೊಸ ಪ್ಯಾಕೇಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ಮೊದಲೇ ರದ್ದು ಮಾಡುವ ಮಹತ್ವದ ತೀರ್ಮಾನವನ್ನು ಮಂಗಳೂರು ಮಹಾನಗರ ಪಾಲಿಕೆಯ ಸಭೆ ನಿರ್ಣಯ ಕೈಗೊಂಡಿದೆ.
ವೈಜ್ಞಾನಿಕ ಟೆಂಡರ್, ಅಧಿಕಾರಿಗಳ ಲೋಪ, ಹಿಂದಿನ ಟೆಂಡರ್‍ಗಿಂತ ಹಲವು ವಿಷಯ ಕೈಬಿಟ್ಟಿರುವ ಹಿನ್ನಲೆಯಲ್ಲಿ ಟೆಂಡರ್ ರದ್ದುಪಡಿಸಿ ಏಳು ವರ್ಷಗಳ ಅವಧಿಗೆ ಟೆಂಡರ್ ನೀಡಲು ಹೊಸ ಡಿಪಿಆರ್ ಮಂಡಿಸಲು ಮಹತ್ವದ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ರೂಲಿಂಗ್ ನೀಡಿದರು.
ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಗುತ್ತಿಗೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 60 ವಾರ್ಡ್‍ಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ ಪ್ರತ್ಯೇಕ ಪ್ಯಾಕೇಜ್‍ಗಳಲ್ಲಿ ಮನೆ ಕಸ ಸಂಗ್ರಹ, ಸಾಗಾಟಕ್ಕೆ ವಾಹನಗಳ ಖರೀದಿ, ಮಾನವ ಸಂಪನ್ಮೂಲ ನಿರ್ವಹಣೆಯೊಂದಿಹೆ ಹೊಸ ಟೆಂಡರ್ ಪಾಲಿಕೆ ವತಿಯಿಂದ ಮಾಡಲಾಗಿತ್ತು. ಆದರೆ ನಾಲ್ಕು ಪ್ಯಾಕೇಜ್ ಕೂಡ ಅವೈಜ್ಞಾನಿಕವಾಗಿದೆ ಎಂದು ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಕಾರ್ಪೋರೇಟರ್ ಎ.ಸಿ ವಿನಯರಾಜ್ ದಾಖಲೆ ಸಹಿತ ವಿವರಿಸಿದರು. ಈ ಸಂದರ್ಭ ಉಪಮೇಯರ್ ಸುನಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಆಮೀನ್, ಗಣೇಶ್ ಕುಮಾರ್, ಭರತ್ ಕುಮಾರ್ ಉಪಸ್ಥಿತರಿದ್ದರು.