ಮಂಜೇಶ್ವರ : ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹ
ಮಂಜೇಶ್ವರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ಮೂಲನೆಗೆ ಹಸಿರು ಕರ್ಮ ಸೇನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಶುಲ್ಕವನ್ನು ಪಡೆದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೊಂಡೊಯ್ಯುತ್ತಿರುವುದು ಸ್ಥಳೀಯರಲ್ಲಿ ಅಲ್ಪವಾದರೂ ಸಮಾಧಾನವನ್ನು ಹುಟ್ಟಿಸಿದೆ.
ಕೆಲವೊಂದು ಕುಟುಂಬಗಳು ಈಗಲೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಹಾಕುತ್ತಿರುವುದು ಮುಂದುವರಿದಿದೆ. ಇಂತಹ ತ್ಯಾಜ್ಯಗಳನ್ನು ಹುಡುಕಿಕೊಂಡು ಬರುತ್ತಿರುವ ಬೀದಿ ನಾಯಿಗಳು ಮದ್ರಸಾ ಹಾಗೂ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿದೆ. ಜೊತೆಯಾಗಿ ಇದರ ದುರ್ಗಂಧದಿಂದ ಜನರು ಮೂಗು ಮುಚ್ಚಿ ಸಾಗುವ ಪರಿಸ್ಥಿತಿ ಎದುರಾಗುವುದರ ಜೊತೆಯಾಗಿ ಸಾಂಕ್ರಾಮಿಕ ರೋಗ ಭೀತಿಯನ್ನು ಕೂಡಾ ಎದುರಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಸಮಾಜ ಸೇವೆಯಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಕುಂತೂರು ಬಳಗದ ಕಾರ್ಯಕರ್ತರು ಮನೆ ಮನೆ ತೆರಳಿ ಜಾಗೃತಿಯನ್ನು ಮೂಡಿಸಿ ಇದರಿಂದಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿಯನ್ನು ನೀಡಿ ಇನ್ನು ಮುಂದಕ್ಕೆ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡದಂತೆ ಮನವಿ ಮಾಡಿದರು.ಕುಂತೂರು ಬಳಗದ ನೇತಾರರಾದ ಇಬ್ರಾಹಿಂ ಕುಂತೂರು, ಸೌಕತ್ ಅಕ್ಕರೆ, ಮುಸ್ತಫ, ಪತ್ರಕರ್ತ ಹನೀಫ್ ಶಾರ್ಜಾ ಮೊದಲಾದವರು ನೇತೃತ್ವ ನೀಡಿದರು.