ದೆಹಲಿಯ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ : ಕವಿತಾ ಸನಿಲ್ ಆಕ್ರೋಶ

ದೆಹಲಿಯಲ್ಲಿ ನಡೆದ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡೆ, ಮಾಜಿ ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮೋದಿ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಮಾಡಿರುವುದು ಸರಿಯಲ್ಲ. ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ಅಮಾನುಷವಾದದ್ದು. ತಮ್ಮ ನ್ಯಾಯಕ್ಕಾಗಿ ಬೀದಿಗಿಳಿದು ಕ್ರೀಡಾಪಟುಗಳು ಹೋರಾಟ ಮಾಡುತ್ತಿದ್ದರು.
ಇದೇ ವೇಳೆ ಈ ರೀತಿ ಹೋರಾಟವನ್ನು ಹತ್ತಿಕ್ಕುವುದು ಎಷ್ಟು ಸರಿ..? ಕ್ರೀಡಾಪಟುಗಳು ಸಾಧನೆ ಮಾಡುವ ಹಾದಿ ಕಷ್ಟಕರ. ನಾನೊಬ್ಬ ಕ್ರೀಡಾಪಟುವಾಗಿ ಕ್ರೀಡಾಪಟುಗಳ ಕಷ್ಟ ಏನಿದೆ ಅನ್ನುವುದು ನನಗೆ ಗೊತ್ತು. ಲೈಂಗಿಕ ಕಿರುಕುಳ ಎಸಗಿದವರ ವಿರುದ್ಧ ಕೂಡಲೇ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಬಂಧಿಸಬೇಕೆಂದು ಆಗ್ರಹಿಸಿದರು.
ಶೀಘ್ರದಲ್ಲೇ ಮಂಗಳೂರಲ್ಲಿ ಕೂಡಾ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮೋದಿ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹೀಳಾ ಮುಖಂಡರಾದ ಅಪ್ಪಿ, ಮಂಜುಳಾ ನಾಯಕ್ , ಜೆಸಿಂತಾ ವಿಜಯ ಅಲ್ಫೆಡ್ ಮತ್ತಿತರರು ಉಪಸ್ಥಿತರಿದ್ದರು.
