ಮಂಜೇಶ್ವರ: ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ನಿಕ್ಷೇಪ ಕೇಂದ್ರ
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ 8 ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ನಿಕ್ಷೇಪ ಕೇಂದ್ರ ಉಪಯೋಗ ಶೂನ್ಯವಾಗಿ ಸುಮಾರು 2 ವರ್ಷ ಕಳೆದರೂ ಯಾರೂ ಇತ್ತ ಕಡೆ ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಲಿನ್ಯ ನಿಕ್ಷೇಪ ಕೇಂದ್ರದಲ್ಲಿ ಶೇಖರಿಸಿಡಬೇಕಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿಕ್ಷೇಪ ಕೇಂದ್ರದ ಹೊರಗಡೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ.
ನಿಕ್ಷೇಪ ಕೇಂದ್ರದ ಹೊರಗಡೆ ಸುರಿಯಲಾಗುತ್ತಿರುವ ತ್ಯಾಜ್ಯಗಳನ್ನು ಬೀದಿ ನಾಯಿಗಳು ಎಲ್ಲೆಂದರಲ್ಲಿ ಹರಡುತ್ತಿದ್ದು ಇದರ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹರಿತ ಕರ್ಮ ಸೇನೆಯವರು ಕೂಡಾ ಮನೆಮನೆಗಳಿಂದ ಹಣ ಪಡೆದು ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಇಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಮಂಜೇಶ್ವರ ಪಂಚಾಯತಿಗೆ ಹಲವು ಬಾರಿ ದೂರು ನೀಡಿದರೂ ಎರಡು ಸಲ ಜೆಸಿಬಿ ಯಲ್ಲಿ ತೆಗೆದರಲ್ಲದೇ ಶಾಶ್ವತ ಪರಿಹಾರ ಕೈಗೊಳ್ಳಲಿಲ್ಲವೆಂದು ಆರೋಪಿಸುವ ಇಲ್ಲಿನ ನಾಗರಿಕರುಇದೀಗ ಸ್ಥಾಪಿಸಲಾಗಿರುವ ಮಾಲಿನ್ಯ ನಿಕ್ಷೇಪ ಕೇಂದ್ರವನ್ನು ಅಲ್ಲಿಂದ ತೆರವು ಗೊಳಿಸಬೇಕು ಹಾಗೂ ಆ ಪರಿಸರದಲ್ಲಿ ಸಿ ಸಿ ಕೆಮರಾ ಅಳವಡಿಸಬೇಕೆಂಬುದು ಆಗ್ರಹಿಸಿದ್ದಾರೆ.