ಮಂಜೇಶ್ವರ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಢಿಕ್ಕಿ, ರಸ್ತೆಯಲ್ಲಿ ವಿದ್ಯಾರ್ಥಿ ಶವವಿಟ್ಟು ನಾಗರಿಕರಿಂದ ಪ್ರತಿಭಟನೆ

ಮಂಜೇಶ್ವರದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿಯಾಗಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿದ್ದು, ಘಟನೆಯನ್ನು ಖಂಡಿಸಿ ಇಂದು ನಾಗರಿಕರು ವಿದ್ಯಾರ್ಥಿ ಸುಮಂತ್‌ನ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.


ಉದ್ಯಾವರ ಮಾಡ ಕ್ಷೇತ್ರ ಸಮೀಪದ ರಘುನಾಥ ಆಳ್ವ ಎಂಬವರ ಪುತ್ರ ಮಂಗಳೂರು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಮಂತ್ (17) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಸುಮಂತ್‌ನ ತಲೆಗೆ ಗಂಭೀರ ಗಾಯಗಳಾಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾನೆ.

ರಾ. ಹೆದ್ದಾರಿಯ ಕಾಮಗಾರಿಯ ಗುತ್ತಿಗೆದಾರರಾಗಿರುವ ಯುಎಲ್‌ಸಿಸಿ ಇಷ್ಟರವರೆಗೆ ಕಾಮಗಾರಿಯ ಡಿಪಿಆರ್‌ನ್ನು ಜನಪ್ರತಿನಿಧಿಗಳಿಗಾಗಲೀ ನಾಗರೀಕರು ಮಾಹಿತಿ ಹಕ್ಕು ಖಾಯಿದೆ ಪ್ರಕಾರ ಕೇಳಿದ ಅರ್ಜಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಕೂಡಲೇ ಎಲ್ಲಾ ಜಂಕ್ಷನ್‌ಗಳಲ್ಲೂ ಫುಟ್ ಬ್ರಿಡ್ಜ್ ನಿರ್ಮಿಸಬೇಕು. ಪಾದಾಚಾರಿಗಳಿಗೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ. ಈ ಸಂದರ್ಭ ಅಶ್ರಫ್ ಬಡಾಜೆ, ಜಬ್ಬಾರ್ ಪದವು, ಸಂಜೀವ ಶೆಟ್ಟಿ, ಹರೀಶ್ ಮಾಡ, ಅಶ್ರಫ್ ಕುಂಜತ್ತೂರು, ಮುಸ್ತಫ ಉದ್ಯಾವರ, ಎಸ್ ಎಂ ಬಶೀರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.