ಅಸಹಾಯಕ ಕುಟುಂಬಕ್ಕೆ ಸೂರು: ಉಪ್ಪಿನಂಗಡಿ ಗಣೇಶೋತ್ಸವ ಸಮಿತಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಕಜೆಕ್ಕಾರ್ ವ್ಯಾಪ್ತಿಯಲ್ಲಿ ಟಾರ್ಪಲ್ ಶೀಟಿನ ಗುಡಿಸಲಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದ ಶ್ರೀಮತಿ ಭಾಗಿರ ಅವರಿಗೆ, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹಲವು ವರ್ಷಗಳಿಂದ ಟಾರ್ಪಲ್ ಹೊದಿಕೆಯಡಿ ಅಸುರಕ್ಷಿತ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಸಹೋದರಿ ಭಾಗಿರ ಅವರ ಕುಟುಂಬಕ್ಕೆ ಸುಸ್ಥಿರ ಮತ್ತು ಗೌರವಯುತ ಸೂರು ಒದಗಿಸುವ ಸಂಕಲ್ಪವನ್ನು ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೈಗೊಂಡಿರುವುದನ್ನು ಶಾಸಕರು ಈ ಸಂದರ್ಭದಲ್ಲಿ ಮನಪೂರ್ವಕವಾಗಿ ಶ್ಲಾಘಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು,
“ಸಮಾಜದ ದುರ್ಬಲ ವರ್ಗದವರಿಗೆ ಸ್ವಂತ ಮನೆ ಎಂಬುದು ಕೇವಲ ಇಟ್ಟಿಗೆ – ಸಿಮೆಂಟ್‌ನ ಕಟ್ಟಡವಲ್ಲ; ಅದು ಅವರ ಪಾಲಿನ ಗೌರವ, ಭದ್ರತೆ ಮತ್ತು ಬದುಕಿನ ಭದ್ರ ಆಧಾರ. ಸರ್ಕಾರದ ಸವಲತ್ತುಗಳಾಚೆಗೂ ಇಂತಹ ಮಾನವೀಯ ಕಾರ್ಯಗಳಿಗೆ ಸಾರ್ವಜನಿಕ ಸಂಘಟನೆಗಳು ಮುಂದಾಗುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ” ಎಂದು ಅಭಿಪ್ರಾಯಪಟ್ಟರು.
ಸಹೋದರಿ ಭಾಗಿರ ಅವರಿಗೆ ಸುರಕ್ಷಿತ ಹಾಗೂ ಗೌರವಯುತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಮುಂದಾದ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಾಮಾಜಿಕ ಬದ್ಧತೆಯನ್ನು ಶಾಸಕರು ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಶಿವ ಕುಮಾರ್, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ದಯಾನಂದ ಉಜಿರೆಮಾರ್, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಪಕ್ಷದ ಪ್ರಮುಖರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.


















